ಬೆಂಗಳೂರು: ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಬೆಂಗಳೂರು ಮಹಾನಗರ, ಜಿಲ್ಲಾ ಕೇಂದ್ರಗಳ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿ ಸಿಎಲ್-2 (ಎ) ಎಂಬ ಹೊಸ ಸನ್ನದು ಮಂಜೂರು ಮಾಡಬೇಕು. ಕನಿಷ್ಠ 7,500 ಚದರಡಿ ವಿಸ್ತೀರ್ಣವಿರುವ ಮಾಲ್, ಸೂಪರ್ ಮಾರುಕಟ್ಟೆಗಳಲ್ಲಿ 400 ಚದರಡಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮದ್ಯ ಮಳಿಗೆ ಮಾಡಲು ಅನುಮತಿ ನೀಡಲು ಪ್ರಸ್ತಾಪ ಇತ್ತು.
ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟ ಮಾಡಲು ಪರವಾನಗಿ ಕೊಡುವುದು ಬೇಡ ಎಂದು ಸೂಚಿಸಿದರು.
ಪರಿಷ್ಕೃತ ಮದ್ಯ ದರ ಜಾರಿ ಸದ್ಯಕ್ಕಿಲ್ಲ: ಮದ್ಯದ ಪರಿಷ್ಕೃತ ದರವನ್ನು ಸದ್ಯಕ್ಕೆ ಜಾರಿ ಮಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಜುಲೈಯಿಂದ ಪರಿಷ್ಕೃತ ಮದ್ಯದ ದರ ಜಾರಿಗೆ ಬರ ಬೇಕಾಗಿತ್ತು. ಆದರೆ, ಅದನ್ನು ಸಿಎಂ ನಿರ್ದೇಶನದ ಮೇರೆಗೆ ತಡೆ ಹಿಡಿಯಲಾಗಿತ್ತು. ಶುಕ್ರವಾರ ನಡೆದ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಒಂದು ತಿಂಗಳು ಪರಿಷ್ಕೃತ ದರವನ್ನು ಜಾರಿ ಮಾಡುವುದು ಬೇಡ ಎಂದು ಸಿಎಂ ಮತ್ತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆ ಮೇಲೆ ಈ ಸಂಬಂಧ ತೀರ್ಮಾನಿಸೋಣ ಎಂದು ತಿಳಿಸಿದ್ದಾರೆ.
ನಿಗದಿತ ಗುರಿಯಂತೆ ಅಬಕಾರಿ ಆದಾಯ ಸಂಗ್ರಹಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸದ್ಯದ ಆದಾಯ ಸಂಗ್ರಹದ ಸ್ಥಿತಿಗತಿ ಅವಲೋಕಿಸಿದ ಸಿಎಂ ಅಬಕಾರಿ ಆದಾಯ ನಿಗದಿತ ಗುರಿ ಮುಟ್ಟುವಂತೆ ಸೂಚಿಸಿದರು.
ಇದನ್ನೂ ಓದಿ: ಮದ್ಯ, ಮಾದಕ ದ್ರವ್ಯ ಸೇವನೆಯಿಂದ 30 ಲಕ್ಷಕ್ಕೂ ಹೆಚ್ಚು ಮಂದಿ ಸಾವು: WHO - Alcohol And Drug Related Deaths