ಬೆಂಗಳೂರು: ''ನಾವು ಯಾರ ಮೇಲೂ ದ್ವೇಷ ಸಾಧಿಸುತ್ತಿಲ್ಲ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಮೋದಾದೇವಿ ಒಡೆಯರ್ ದ್ವೇಷ ರಾಜಕಾರಣದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ''ದ್ವೇಷ ಸಾಧಿಸುವ ಪ್ರಶ್ನೆಯೇ ಇಲ್ಲ. ಬೆಂಗಳೂರು ಅರಮನೆ ಮೈದಾನಕ್ಕೆ ಟಿಡಿಆರ್ ಕೊಟ್ಟರೆ ಮುಂದಿನ ಅಭಿವೃದ್ಧಿಗೆ ಸಮಸ್ಯೆ ಆಗುತ್ತದೆ. ಯಾರ ಮೇಲೆಯೂ ನಾವು ದ್ವೇಷ ಮಾಡುವುದಿಲ್ಲ'' ಎಂದರು.
''15.36 ಎಕರೆ ಭೂಮಿಗೆ 3,011 ಕೋಟಿ ರೂ. ಟಿಡಿಆರ್ ಆಗುತ್ತದೆ. ಅದರಂತೆ ಎಕರೆಗೆ 200 ಕೋಟಿ ರೂ. ಆಗುತ್ತದೆ. ಇದನ್ನು ಕೊಟ್ಟರೆ ಜನರ ಮೇಲೆ, ಅಭಿವೃದ್ಧಿ ಮೇಲೆ ಏನು ಪರಿಣಾಮ ಬೀರುತ್ತದೆ?. ಟಿಡಿಆರ್ ಕೊಡಲು ಸಿದ್ಧರಿದ್ದೇವೆ. ಆದರೆ, ಈ ಪ್ರಮಾಣದಲ್ಲಿ ಟಿಡಿಆರ್ ಕೊಡಲು ಆಗುವುದಿಲ್ಲ. ನಾವು ರಸ್ತೆ ಅಗಲೀಕರಣ ಮಾಡಲು ಬೆಂಗಳೂರು ಅರಮನೆ ಮೈದಾನದ ಭೂಮಿ ಪಡೆದುಕೊಂಡಿದ್ದೇವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಟಿಡಿಆರ್ ಕೊಟ್ಟರೆ ಸಾರ್ವಜನಿಕರಿಗೆ ಭಾರ ಆಗುತ್ತದೆ'' ಎಂದು ತಿಳಿಸಿದರು.
ಇದನ್ನೂ ಓದಿ: ಅರಮನೆ ಮೈದಾನ ರಸ್ತೆ ಅಗಲೀಕರಣ ಯೋಜನೆ ಕೈಬಿಡಲು ಅಧಿಕಾರ ನೀಡುವ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ತೀರ್ಮಾನ!
''ಟಿಡಿಆರ್ ಕೊಡಲು ಆಗದೇ ಇದ್ದರೆ ರಸ್ತೆ ಅಗಲೀಕರಣ ಯೋಜನೆಯನ್ನೇ ಕೈ ಬಿಡುತ್ತೇವೆ ಎಂದು ಹೇಳಿದ್ದೇವೆ. ಯಾರ ವಿರುದ್ಧವೂ ದ್ವೇಷ ಇಲ್ಲ. ಅಭಿವೃದ್ಧಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸುಗ್ರೀವಾಜ್ಞೆ ತರುತ್ತಿದ್ದೇವೆ ಅಷ್ಟೇ'' ಎಂದು ಸಿಎಂ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬೆಂಗಳೂರು ಅರಮನೆ ಜಾಗ ನಮ್ಮದೇ, ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ: ಪ್ರಮೋದಾದೇವಿ ಒಡೆಯರ್