ಧಾರವಾಡ : ಐದು ಗ್ಯಾರೆಂಟಿಗಳಿಗೆ ಹಣ ಹೊಂದಿಸಿ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ ಎಂಬ ಬಿಜೆಪಿಯ ಆರೋಪ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ. ಅದರಲ್ಲಿ ಉರುಳಿಲ್ಲ, ಸತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ನವಲಗುಂದ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಕ್ಕೆ ಉದ್ಘಾಟನೆ, ಶಂಕುಸ್ಥಾಪನೆ ಆಗಿದೆ. ಗ್ಯಾರಂಟಿ ಯೋಜನೆ ಕೊಟ್ಟಿದ್ದಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲ ಎಂದು ವಿರೋಧ ಪಕ್ಷದವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನೀವೇ ಕಣ್ಣಾರೆ ನೋಡಿದ್ದೀರಿ, ಇಂದು ಅನೇಕ ಕಾರ್ಯಕ್ರಮಕ್ಕೆ ಶಂಕು ಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದೇವೆ. ನವಲಗುಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಬಿಜೆಪಿ ವಿರುದ್ಧ ಸಿಎಂ ಕಿಡಿಕಾರಿದರು.
1385 ಜನರಿಗೆ ವಸತಿ ಹಕ್ಕು ಪತ್ರ ಕೊಡುತ್ತಿರುವುದು ಅಭಿವೃದ್ಧಿಯೋ? ಅಲ್ಲವೋ? ಎಂದು ನೀವೇ ತೀರ್ಮಾನ ಮಾಡಬೇಕು. ಶಾಸಕ ಕೋನರೆಡ್ಡಿ ಕ್ರಿಯಾಶೀಲ ಶಾಸಕ. ಹಿಂದೆ ಜೆಡಿಎಸ್ನಲ್ಲಿದ್ದರು ಸಹ ಹಲವು ಕೆಲಸಗಳನ್ನು ಹೆಚ್.ಕೆ ಪಾಟೀಲ್ ಕಡೆಯಿಂದ ಮಾಡಿಸಿದ್ದಾರೆ. ಈ ಅವಧಿಯಲ್ಲೂ ಅವರು ಸುಮಾರು ಕೆಲಸಗಳನ್ನು ಮಾಡಿಸಿದ್ದಾರೆ. ಹಿಂದೆ ನಾನು ಸಿಎಂ ಆಗಿದ್ದಾಗ, 2018 ರ ವರೆಗೆ ಕೊಟ್ಟ ಮಾತಿನಂತೆ ನಡೆದಿದ್ದೇನೆ. 600 ಭರವಸೆಗಳನ್ನು ಬಿಜೆಪಿ ಕೊಟ್ಟಿತ್ತು. ಆದರೇ 60 ಭರವಸೆಗಳನ್ನೂ ಈಡೇರಿಸಿಲ್ಲ. ಕೇವಲ 8 ತಿಂಗಳಲ್ಲಿ ನಾವು ಕೊಟ್ಟಿರುವ 5 ಗ್ಯಾರಂಟಿ ಭರವಸೆಗಳನ್ನು ಇಡೇರಿಸಿದ್ದೇವೆ.
ಸರ್ಕಾರಿ ಬಸ್ಗಳಲ್ಲಿ ಟಿಕೆಟ್ ಇಲ್ಲದೆ ಮಹಿಳೆಯರು ರಾಜ್ಯದೊಳಗೆ ಎಲ್ಲಿ ಬೇಕಾದರೂ ಓಡಾಡಬಹುದು. 160 ಕೋಟಿ ಮಹಿಳೆಯರು ಜೂನ್ನಿಂದ ಇಲ್ಲಿಯವರೆಗೆ ಉಚಿತವಾಗಿ ಓಡಾಡುತ್ತಿದ್ದಾರೆ. ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದು ಬಿಜೆಪಿಯವರು ಹೇಳಿದ್ದರು. ಆಗಿದ್ರೆ ಇಷ್ಟೊಂದು ಶಂಕು ಸ್ಥಾಪನೆ ಆಗುತ್ತಿತ್ತಾ..? ನಮಗೆ ಪ್ರೇರಣೆ ಆಗಿದ್ದು, ಬಸವಾದಿ ಶರಣರು. ಅವರು ನುಡಿದಂತೆ ನಡೆದವರು. ಮನೆ ಯಜಮಾನಿಗೆ ಪ್ರತಿ ತಿಂಗಳಿಗೆ 2 ಸಾವಿರ ನೇರವಾಗಿ ಜಮಾ ಆಗುತ್ತಿದೆ. ಈ ಎಲ್ಲ ಯೋಜನೆಗೆ ಮಧ್ಯವರ್ತಿಗಳು ಇಲ್ಲ, ಲಂಚ ಇಲ್ಲದೆ ಹಣ ವರ್ಗಾವಣೆ ಆಗುತ್ತಿದೆ. ಕೇಂದ್ರ ಸರ್ಕಾರ ಅಡ್ಡ ಬಂದು ಅಕ್ಕಿ ಇದ್ದರು ಕೊಡಲಿಲ್ಲ. ಪುಕ್ಕಟೆ ಅಲ್ಲ ಹಣ ಕೊಡುತ್ತೇವೆ ಕೊಡಿ ಅಂದ್ರು ಕೊಡಲಿಲ್ಲ. ಹೀಗಾಗಿ 170 ರೂ. ಬಿಪಿಎಲ್ ಕಾರ್ಡ್ದಾರರಿಗೆ ಹಣ ನೀಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ತಮ್ಮ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.
ಈ ಹಿಂದೆ ಯಾವಾಗಾದರೂ ಯೋಜನೆಗಳು ಈ ರೀತಿ ಇದ್ದವಾ? ಮುಂದಿನ ವರ್ಷಕ್ಕೆ 52980 ಕೋಟಿ ರೂ. ಹಣವನ್ನು ಬಜೆಟ್ನಲ್ಲಿ ಇಟ್ಟಿದ್ದೇವೆ. 3,71,383 ಕೋಟಿ ರೂ. ಮೊನ್ನೆಯ ಬಜೆಟ್ ಹಣ. ಕಳೆದ ಬಾರಿ 3.27 ಸಾವಿರ ಕೋಟಿ ಯಿಂದ 3.71 ಸಾವಿರ ಕೋಟಿ ರೂ. ಬಜೆಟ್ ಗಾತ್ರ ಹೆಚ್ಚಿಸಿದ್ದೇವೆ. ಸುಮಾರು 43 ಸಾವಿರ ಕೋಟಿ ರೂ. ಹೆಚ್ಚು ಇದೆ. ವಿರೋಧ ಪಕ್ಷಕ್ಕೆ ವರದಿ ಕೊಡಬೇಕಾಗಿಲ್ಲ. ನೀವು ನಮ್ಮ ಮಾಲೀಕರು, ನಿಮಗೆ ವರದಿ ಕೊಡಬೇಕು ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರಕ್ಕೆ ನೀಡುತ್ತಿರುವ ನೂರು ರೂಪಾಯಿಯಲ್ಲಿ 13 ರೂ. ನಮಗೆ ಬರಬೇಕು. ಈ ಬಗ್ಗೆ ಸದನದಲ್ಲಿ ಯಾರು ಸಹ ಪ್ರಶ್ನೆ ಮಾಡುತ್ತಿಲ್ಲ. ಇದನ್ನು ಕೇಳಿದ್ರೆ ಸಿದ್ದರಾಮಯ್ಯ ಕಾಲು ಕೆರೆದುಕೊಂಡು ಕೇಂದ್ರ ಸರ್ಕಾರದ ಕಡೆ ಹೋಗುತ್ತಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಗುಜರಾತ್ನಿಂದ ತೆರಿಗೆ ಕೊಡಲ್ಲ. ನೀವು ಕೊಡಬೇಡಿ ಎಂದು ನರೇಂದ್ರ ಮೋದಿ ಹೇಳಿದ್ದರು. ಈಗ ದೇಶ ಒಡೆಯುವ ಕಾರ್ಯ ಅಂತ ಹೇಳುತ್ತಾರೆ. ನೀವು ಸಿಎಂ ಆದಾಗ ಒಂದು ನಾಲಿಗೆ, ಈಗ ಒಂದು ನಾಲಿಗೆ ಯಾಕೆ? ಒಕ್ಕೂಟದಲ್ಲಿ ನಾವು ಇದ್ದೇವೆ. ಕೇಂದ್ರ ಸರ್ಕಾರ ನೋಟ್ ಪ್ರಿಂಟ್ ಮಾಡಲ್ಲ. 7 ಕೋಟಿ ಕನ್ನಡಿಗರಿಗೆ ಇವರು ಮಾಡುತ್ತಿರುವ ದ್ರೋಹ. ಇದು ನಮಗೆ ನ್ಯಾಯಯುತವಾಗಿ ಹಣ ಬಂದರೆ, ಹೆಚ್ಚು ಕೆಲಸ ಆಗುತ್ತವೆ. ಹೀಗಾಗಿ ನಮಗೆ ನ್ಯಾಯಯುತ ಹಣ ಬೇಕು. ಉತ್ತರ ಭಾರತಕ್ಕೆ ಹಣ ಕೊಡಬೇಡಿ ಅಂತ ಅವರಿಗೆ ಹೇಳಿಲ್ಲ. ಕೊಡಿ, ಆದ್ರೆ ಕರ್ನಾಟಕಕ್ಕೆ ನ್ಯಾಯಯುತ ಹಣ ನೀಡಿ. ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಸಿಎಂ ಪುನರುಚ್ಚರಿಸಿದರು.
ಇದೇ ವೇಳೆ ಸಚಿವ ಸಂತೋಷ ಲಾಡ್ ಮಾತನಾಡಿ, ಜಿಲ್ಲೆಯ ಗ್ಯಾರೆಂಟಿಗಳ ಕುರಿತು ವರದಿ ವಾಚಿಸಿದರು. ನವಲಗುಂದ ಶಾಸಕ ಎನ್.ಹೆಚ್ ಕೋನರೆಡ್ಡಿ ತಮ್ಮ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿದರು.
ಇದನ್ನೂ ಓದಿ : ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು: ಸಿಎಂ ಸಿದ್ದರಾಮಯ್ಯ