ಬೆಳಗಾವಿ: ಪಂಚಮಸಾಲಿ ಸಮುದಾಯದ ಮೀಸಲಾತಿ ಸಂಬಂಧ ಮಂಗಳವಾರ ಸರ್ಕಾರದ ಸ್ಪಷ್ಟ ನಿಲುವು ತಿಳಿಸಿ, ಉತ್ತರ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಸದನದ ಬಾವಿಗೆ ಇಳಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಪಂಚಮಸಾಲಿ ಸಮುದಾಯದಿಂದ ಮೀಸಲಾತಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನಾಕಾರರು 5,000 ಟ್ರ್ಯಾಕ್ಟರ್ ತಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಉದ್ದೇಶಿಸಿದ್ದರು. ಅಷ್ಟು ಟ್ರ್ಯಾಕ್ಟರ್ ಸುವರ್ಣಸೌಧಕ್ಕೆ ಬಂದರೆ ಅಧಿವೇಶನ ನಡೆಸಲು ಕಷ್ಟವಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಅದಕ್ಕಾಗಿ ಅನುಮತಿ ನೀಡಿಲ್ಲ. ಈಗ ಟ್ರ್ಯಾಕ್ಸ್ ಮೂಲಕ ಬರಲು ಒಪ್ಪಿದ್ದಾರೆ. ಅನುಮತಿ ನೀಡುತ್ತೇವೆ. ಆದರೆ ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ತಿಳಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಮ್ಮ ಸಮುದಾಯ ಬಹಳ ಹಿಂದುಳಿದಿದೆ. 2A ಮೀಸಲಾತಿ ಕುರಿತು ಸಭೆ ನಡೆಸಿ ಈ ಸಂಬಂಧ ತೀರ್ಮಾನ ಕೈಗೊಳ್ಳುವಂತೆ ಕೋರಿದರು. ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆಯೂ ಮನವಿ ಮಾಡಿದರು.
ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಪಂಚಮಸಾಲಿ ಲಿಂಗಾಯತರನ್ನು 2Aಗೆ ಸೇರಿಸುವಂತೆ ಹೋರಾಟ ಮಾಡುತ್ತಿದ್ದಾರೆ. ನಾನು ಎರಡು ಬಾರಿ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೇನೆ. ಈ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ್ದೇನೆ. ಮೀಸಲಾತಿ ಕೊಡಲು ಅಡ್ಡ ಬರಲ್ಲ, ವೀರಶೈವ ಲಿಂಗಾಯತ ಸಮುದಾಯ ಕೆಟಗರಿ 3Bಯಲ್ಲಿ ಬರುತ್ತಾರೆ. ಕೆಟಗರಿ ಬದಲಾವಣೆ ಮಾಡಬೇಕಾದರೆ ಖಾಯಂ ಹಿಂದುಳಿದ ವರ್ಗಗಳ ಆಯೋಗ ಇದೆ. ಅದರ ಮುಂದೆ ಅರ್ಜಿ ಹಾಕಿ ಅಂತಾ ಸಭೆಯಲ್ಲಿ ತಿಳಿಸಿದ್ದೆ. ಹಿಂದಿನ ಸರ್ಕಾರ ಸಮುದಾಯವನ್ನು 2A ಗೆ ಸೇರಿಸಿಲ್ಲ. ಆದರೆ ಅವರು ಮುಸ್ಲಿಂ ಮೀಸಲಾತಿ ರದ್ದು ಮಾಡಿದರು. ಅದರಲ್ಲಿ ಶೇ.2ರಷ್ಟು ಲಿಂಗಾಯತ ಸಮುದಾಯಕ್ಕೆ ನೀಡಿದ್ದರು ಎಂದು ತಿಳಿಸಿದರು.
ಇದರ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ನಲ್ಲಿ ಬಿಜೆಪಿ ಸರ್ಕಾರವೇ ಯಥಾಸ್ಥಿತಿ ಕಾಪಾಡುತ್ತೇವೆ ಎಂದು ಅಫಿಡವಿಟ್ ನೀಡಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಪ್ರತಿಯನ್ನು ನಾಳೆ ಸದನದ ಮುಂದೆ ಇಡುತ್ತೇನೆ. ನಾನು ಆ ಬಗ್ಗೆ ನಾಳೆ ಸರ್ಕಾರದ ಸ್ಪಷ್ಟ ನಿಲುವು ತಿಳಿಸಿ ಉತ್ತರ ನೀಡುತ್ತೇನೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ: ಅಧಿವೇಶನದ ಮೊದಲ ದಿನವೇ ವಕ್ಫ್, ಪಂಚಮಸಾಲಿ ಮೀಸಲಾತಿ ಸದ್ದು; ಸದನದಲ್ಲಿ ಮಾತಿನ ಚಕಮಕಿ, ಗದ್ದಲ