ಮೈಸೂರು: ಚುನಾವಣಾ ಬಾಂಡ್ ಸಂಬಂಧಿಸಿದಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆಯೂ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ. ಈ ಸಂದರ್ಭದಲ್ಲಿ ಅವರು ರಾಜೀನಾಮೆ ಕೊಡುತ್ತಾರೆಯೇ ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 17 ಎ ಪ್ರಕಾರ ಪ್ರಕರಣ ದಾಖಲು ಮಾಡಿ, ತನಿಖೆ ಮಾಡುತ್ತಾರೆಂದರು. ಇನ್ನು ಬಿಜೆಪಿ ನಾಯಕರ ರಾಜೀನಾಮೆ ಆಗ್ರಹಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಜಾಮೀನಿನ ಮೇಲೆ ಹೊರಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮೊದಲು ರಾಜೀನಾಮೆ ನೀಡಲಿ. ಚುನಾವಣಾ ಬಾಂಡ್ ಸಂಬಂಧ ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶಿಸಿದ್ದು, ಅವರು ರಾಜೀನಾಮೆ ಕೊಡುತ್ತಾರೆಯೇ?, ಚುನಾವಣಾ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ಮೋದಿಯವರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದರು.
ದಸರಾ ಬಗ್ಗೆ ಮಾತನಾಡಿದ ಸಿಎಂ, ಈ ಬಾರಿ ಅದ್ಧೂರಿ ದಸರಾ ಮಾಡಲು ಸೂಚಿಸಲಾಗಿದೆ. ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಹಂ.ಪಾ.ನಾಗರಾಜಯ್ಯ ದಸರಾ ಉದ್ಘಾಟನೆ ಮಾಡಲಿದ್ದಾರೆ. ಅಂದೇ ಎಲ್ಲಾ ಸಾಂಸ್ಕೃತಿಕಾ ಕಾರ್ಯಕ್ರಮಗಳು ಅರಮನೆ ಮುಂಭಾಗದಲ್ಲಿ ಉದ್ಘಾಟನೆ ಆಗುತ್ತದೆ. ದಸರಾ ಉದ್ಘಾಟನೆಗೆ ಮೈಸೂರಿಗೆ ಬರುತ್ತೇನೆ. ಈ ಬಾರಿ ದಸರಾವನ್ನು ಅಚ್ಚುಕಟ್ಟಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಕಾನೂನು ಲೋಪ ನಡೆಯದಂತೆ ಪೊಲೀಸರಿಗೆ ಸೂಚನೆ: ದಸರಾ ಮಹೋತ್ಸವದಲ್ಲಿ ಉತ್ತಮ ರಸ್ತೆ, ವಿದ್ಯುತ್ ಅಲಂಕಾರ ಸೇರಿದಂತೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ
ಈ ಬಾರಿ ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಬೇಕಿತ್ತು. ಆದರೆ, ಈಗಾಗಲೇ ತಮಿಳುನಾಡಿಗೆ 207 ಟಿಎಂಸಿ ನೀರು ಹರಿದಿದೆ . ನಮ್ಮ ಮತ್ತು ತಮಿಳುನಾಡು ನಡುವೆ ಯಾವುದೇ ಸಮಸ್ಯೆ ಇರಲ್ಲ ಎಂದರು.
ನಾಗಮಂಗಲ ಗಲಾಟೆ ಪೋಲೀಸರ ವೈಫಲ್ಯದಿಂದ ನಡೆಯಿತು. ಆ ರೀತಿ ಘಟನೆಗಳು ಮೈಸೂರಿನಲ್ಲಿ ಆಗದಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಕ್ಲಬ್ಗಳಲ್ಲಿ ಡ್ರಗ್ಸ್ ಮತ್ತು ಗಾಂಜಾ ತಡೆಯಲು ಸೂಚಿಸಿದ್ದು, ಈ ಚಟಕ್ಕೆ ಯುವಕರು ಬಲಿಯಾಗುತ್ತಿದ್ದಾರೆ. ತಡೆಯಿರಿ ಎಂದು ಪೋಲೀಸರಿಗೆ ಸೂಚಿಸಿದ್ದೇನೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ಜಮಿನು ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒತ್ತುವರಿ ತೆರವು ಮಾಡಿ, ಸರ್ಕಾರಿ ಜಾಗ ಉಳಿಸಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಎಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.