ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಇಷ್ಟು ವರ್ಷ ಸುಳ್ಳಿನ ಮಾರುಕಟ್ಟೆ ಮಾಡಿಕೊಂಡು ಬಂದಿದ್ದಾರೆ. ಮೀಸಲಾತಿ ವಿಚಾರದಲ್ಲಿ ಅವರು ನೀಡಿದ ಹೇಳಿಕೆ ಅಪ್ಪಟ ಸುಳ್ಳಿನಿಂದ ಕೂಡಿದೆ. ಹಿಂದುಳಿದವರ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ಕೊಡುತ್ತಾರೆ ಎನ್ನುವ ಮೋದಿ ಹೇಳಿಕೆಯು ರಾಜಕೀಯ ಪ್ರೇರಿತವಾಗಿದೆ. ಮಹಿಳೆಯರ ಮಾಂಗಲ್ಯದ ಬಗ್ಗೆಯೂ ಕೂಡ ನೀಡಿದ ಅವರ ಹೇಳಿಕೆ ಹತಾಶೆಯಿಂದ ಕೂಡಿದೆ. ಅವರ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಿಎಂ ಹೇಳಿದರು.
ಮೀಸಲಾತಿ: ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿಯನ್ನು ಯಾವ ಕಾರಣಕ್ಕೆ ಬಿಜೆಪಿ ಬೆಂಬಲಿಸಿಲ್ಲ. ಅಡ್ವಾಣಿ ಮೀಸಲಾತಿ ವಿರುದ್ಧ ರಥಯಾತ್ರೆ ಕೈಗೊಂಡಿದ್ದರು. ಬಿಜೆಪಿ ಎಂ ಪಿ ರಾಮಾ ಜೋಯಿಸ್ ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಸಲ್ಲಿಸಿದ್ದರು. ಆದರೆ ಮೀಸಲಾತಿ ನೀಡಿದ್ದನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದಿತ್ತು ಎಂದು ಸಿಎಂ ನೆನಪಿಸಿಕೊಂಡರು.
ಸಂವಿಧಾನದ ಆರ್ಟಿಕಲ್ 15 ಹಾಗೂ 16 ಪ್ರಕಾರ ಎಲ್ಲರೂ ಸಮಾನರು. ಆದರೆ ಆರ್ಟಿಕಲ್ 14ರ ಪ್ರಕಾರ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬಹುದು. ಮಂಡಲ್ ಆಯೋಗದ ವರದಿಯಲ್ಲಿ ಇದನ್ನೇ ಹೇಳಲಾಗಿದ್ದು, ಹಿಂದುಳಿದ ವರ್ಗಗಳ ಆಯೋಗ ಇರಬೇಕು ಎಂದು ಹೇಳಿದೆ. ಆದರೆ ವರದಿ ವಿರುದ್ಧ ಬಿಜೆಪಿ ವಿದ್ಯಾರ್ಥಿಗಳನ್ನು ಪ್ರಚೋದಿಸಿತ್ತು. ಮೀಸಲಾತಿ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಕೂಡಾ ಒಪ್ಪಿಕೊಂಡಿದ್ದು, ಅದು ಶೇ 50% ಮೀರಬಾರದು ಎಂದು ನಿಗದಿಪಡಿಸಿದೆ.
ಆದರೆ, ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕೊಟ್ಟಿದೆ. ಜೊತೆಗೆ ಬೊಮ್ಮಾಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ ಎನ್ನುವ ಕಾರಣ ನೀಡಿ, ಮುಸ್ಲಿಂರಿಗೆ ಕೊಟ್ಟಿದ್ದ ಮೀಸಲಾತಿಯನ್ನು ರದ್ದುಗೊಳಿಸಿದೆ. ಈ ಕುರಿತು ಸುಪ್ರಿಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಸಿಎಂ ಹೇಳಿದರು.
1974-75 ರಲ್ಲಿ ನಡೆದ ಸಂವಿಧಾನದ ತಿದ್ದುಪಡಿ ಮೂಲಕ ಜಿ.ಪಂ ಹಾಗೂ ತಾ.ಪಂ ಗಳಲ್ಲಿ ಮಹಿಳೆಯರಿಗೆ ಹಾಗೂ ಹಿಂದುಳಿದವರಿಗೆ ಮೀಸಲಾತಿ ನೀಡಿತ್ತು. ನರಸಿಂಹರಾವ್ ಪ್ರಧಾನಿ ಆಗಿದ್ದಾಗ ರಾಜ್ಯದಲ್ಲಿ ಬಿಸಿಎ ಬಿಸಿಬಿ ಮೀಸಲಾತಿ ತರಲಾಯಿತು ಎಂದರು.
ಮಹಿಳೆಯರಿಗೆ 33% ಮೀಸಲಾತಿ ತರಲಾಯಿತು. ಹಿಂದುಳಿದವರಿಗೆ 33% ಮೀಸಲಾತಿ, ಬಿಸಿ (ಎ) ಗೆ 26.4% ಹಾಗೂ ಬಿಸಿ (ಬಿ)ರವರಿಗೆ 6.6% ಮೀಸಲಾತಿ ನೀಡಲಾಗಿತ್ತು. ಆಗಿನಿಂದ ಈಗಿನವರೆಗೂ ಮುಸ್ಲಿಂರು ಬಿಸಿಎ ನಲ್ಲಿ ಇದ್ದಾರೆ ಎಂದು ಸಿಎಂ ವಿವರಿಸಿದರು. 1994 ರಲ್ಲಿ ಸಲ್ಲಿಕೆಯಾದ ಚಿನ್ನಪ್ಪರೆಡ್ಡಿ ವರದಿ ಪ್ರಕಾರ ಮಸ್ಲಿಂರಿಗೆ 4% ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಆಗ ವೀರಪ್ಪ ಮೊಯ್ಲಿ ಸಿಎಂ ಆಗಿದ್ದರು. ಆದರೆ ಅದು ದೇವೇಗೌಡರು ಸಿಎಂ ಆಗಿದ್ದಾಗ ಜಾರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸೀಟು ಗೆಲ್ಲಲಿದೆ: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ ಎನ್ನುವ ವರದಿಗಳು ಬಂದಿವೆ ಎಂದು ಹೇಳಿದ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳು ಜನರ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ಹತ್ತು ವರ್ಷದ ವೈಫಲ್ಯ ಹಾಗೂ ನಮ್ಮ ಸರ್ಕಾರದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದೇವೆ. ನಾನು ಸಚಿವರುಗಳೊಂದಿಗೆ ಮಾತನಾಡಿದ್ದೇನೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಡಿ ಕೆ ಶಿ ಹಾಗೂ ನನ್ನ ನಡುವೆ ಭಿನ್ನಮತವಿಲ್ಲ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಶೀತಲ ಸಮರ ನಡೆದಿದೆ ಎನ್ನುವ ಆಸ್ಸೋಂ ಸಿಎಂ ಹಿಮಂತ್ ಬಿಸ್ವಾ ಶರ್ಮ ಹೇಳಿಕೆಗೆ ಪ್ರತಿಕ್ರಿಯಿಸಿದ, ತಮ್ಮ ಹಾಗೂ ಡಿಕೆ ಶಿವಕುಮಾರ ಮಧ್ಯೆ ಯಾವುದೇ ಶೀತಲ ಸಮರವಿಲ್ಲ ಎಂದು ಸ್ಪಷ್ಟಪಡಿಸಿದರು. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಮತದಾರರು ಬುದ್ಧಿವಂತರಿದ್ದು, ನಮಗೆ ಆಶೀರ್ವಾದ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ಇದನ್ನೂಓದಿ:ಈಗ ಕೊಟ್ಟಿರುವ ಬರ ಪರಿಹಾರ ಹಣ ಸಾಕಾಗಲ್ಲ, ಹೋರಾಟ ಮುಂದುವರೆಸುತ್ತೇವೆ: ಡಿ.ಕೆ.ಶಿವಕುಮಾರ್ - DROUGHT RELIEF FUND