ಬೆಂಗಳೂರು: 15ನೇ ಹಣಕಾಸು ಆಯೋಗದ ಅವಧಿಯಲ್ಲಿ ರಾಜ್ಯಕ್ಕೆ 78,000 ಕೋಟಿ ರೂ ನಷ್ಟ ಆಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಹಿಂದಿನ ಆಯೋಗದ ನಿರ್ಧಾರಕ್ಕೆ ತಾವು ಜವಾಬ್ದಾರನಲ್ಲ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ ಪಂಗಾರಿಯ ತಿಳಿಸಿದರು.
ಖಾಸಗಿ ಹೋಟೆಲ್ನಲ್ಲಿ ರಾಜ್ಯ ಸರ್ಕಾರದ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮನವಿಯನ್ನ ನಾವು ಸ್ವೀಕರಿಸಿದ್ದೇವೆ. ರಾಜ್ಯಗಳು ಕೆಲ ತೆರಿಗೆಗಳನ್ನು ಸಂಗ್ರಹ ಮಾಡತ್ತವೆ. ಆದರೆ ಕೇಂದ್ರ ಸರ್ಕಾರ ಬಹುಪಾಲು ತೆರಿಗೆ ಸಂಗ್ರಹ ಮಾಡುತ್ತೆ. ಕೇಂದ್ರ ಸರ್ಕಾರ ತೆರಿಗೆ ಸಂಗ್ರಹ ಮಾಡಿದ ಹಣವನ್ನು ಎಲ್ಲಾ ರಾಜ್ಯಗಳಿಗೆ ಹಂಚಲು ಫೈನಾನ್ಸ್ ಕಮಿಷನ್ ಸಹಾಯ ಮಾಡಲಿದೆ. ಈ ಪೈಕಿ ವಿಶೇಷ ಪ್ಯಾಕೇಜ್ ಕೂಡ ಸೇರಿರುತ್ತದೆ ಎಂದು ತಿಳಿಸಿದರು.
ರಾಜ್ಯಕ್ಕೆ 70 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ನೀವು ಒಪ್ಪಿಕೊಳ್ಳುತ್ತೀರಾ, ಹಿಂದಿನ ನಷ್ಟಕ್ಕೆ ಪರಿಹಾರ ಕೊಡಲಾಗುತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕರ್ನಾಟಕ ಸರ್ಕಾರ ಪ್ರಸ್ತಾವನೆ ಕೊಟ್ಟಿದೆ. ಹಿಂದಿನ ನಷ್ಟಕ್ಕೆ ಪರಿಹಾರ ಕೊಡುವ ವ್ಯವಸ್ಥೆ ಇಲ್ಲ. ಸೆಸ್ ಹಾಗೂ ಸರ್ಚಾರ್ಜ್ ಬಗ್ಗೆ ಹಿಂದಿನ ಹಣಕಾಸು ಆಯೋಗ ಬದಲಾವಣೆ ಮಾಡಲು ಶಿಫಾರಸ್ಸು ಮಾಡಿಲ್ಲ. ಹೀಗಾಗಿ ಇದರ ಬಗ್ಗೆ ಈಗ ಮಾತನಾಡಲು ಹೋಗಲ್ಲ ಎಂದರು.
ಇವತ್ತು ಸುದೀರ್ಘ ಸಭೆ ನಡೆದಿದೆ. ರಾಜ್ಯ ಸರ್ಕಾರದಿಂದ ಅತ್ಯುತ್ತಮ ರೀತಿಯಲ್ಲಿ ಪ್ರಸ್ತಾವನೆ ಸಲ್ಲಿಕೆಯಾಯಿತು. ಈವರೆಗೆ ನಾಲ್ಕು ರಾಜ್ಯಗಳಿಗೆ ಆಯೋಗ ಭೇಟಿ ನೀಡಿದೆ. ಕರ್ನಾಟಕದ್ದು ವಿಶೇಷ ರೀತಿಯ ಪ್ರಸ್ತಾವನೆ ಬಂತು. ಕರ್ನಾಟಕ ವಿಭಿನ್ನವಾಗಿ ಅಪೇಕ್ಷೆ ಮಂಡಿಸಿ ಗಮನ ಸೆಳೆಯಿತು. ಹಂಚಿಕೆ ಹೇಗೆ ಆಗಬೇಕು?, ಪ್ರಕೃತಿ ವಿಕೋಪ ಪರಿಹಾರಕ್ಕೆ ವಿಶೇಷ ಅನುದಾನ ನೀಡುವ ಬೇಡಿಕೆ, ತೆರಿಗೆ ಹಂಚಿಕೆ ಮಾಡುವಾಗ ರಾಜ್ಯಗಳ ಪಾಲು ಹೆಚ್ಚಿಸಬೇಕೆಂದು ಕರ್ನಾಟಕ ಕೋರಿಕೆ ಇಟ್ಟಿದೆ. ಯಾವ ಕಾರಣಕ್ಕೆ ಹೆಚ್ಚಿಸಬೇಕೆಂದು ಕಾರಣಗಳನ್ನು ನೀಡಿದೆ. ಸಾಂಪ್ರದಾಯಿಕ ವಿಧಾನದ ಬದಲು ಇಂದಿನ ಸಂದರ್ಭಕ್ಕೆ ತಕ್ಕಂತೆ ಸ್ವರೂಪ ಬದಲಿಸಲು ಸಲಹೆ ಬಂದಿದೆ ಎಂದು ಪ್ರತಿಕ್ರಿಯೆ ನೀಡಿದರು.
ಭೌತಿಕ ಕೊಡುಗೆ ಆಧಾರದಲ್ಲಿ ಅನುದಾನವನ್ನೂ ಹೆಚ್ಚಿಸಬೇಕು. ಜಿಎಸ್ಡಿಪಿ ಆಧಾರದಲ್ಲಿ ಅನುದಾನವೂ ಸಿಗುವಂತಾಗಬೇಕು ಎಂಬ ಪ್ರಸ್ತಾವನೆ ಬಂದಿದೆ. 23 ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ನಂತರ ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ. ಸೆಸ್ ಸರ್ಚಾರ್ಜ್ ವಿಚಾರದಲ್ಲಿ ಕೇಂದ್ರದ ನಿಲುವು ಬದಲಾಗಬೇಕೆಂಬುದು ರಾಜ್ಯದ ವಾದದ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಹಂತದಲ್ಲಿ ಆಯೋಗ ಅಭಿಪ್ರಾಯ ಕೊಡುವುದು ಕಷ್ಟ. ಆದಾಯ ಸಂಗ್ರಹ ವಿಚಾರದಲ್ಲಿ ಸೆಸ್ ಸರ್ಚಾರ್ಜ್ ಕೇಂದ್ರಕ್ಕೆ ಹೋಗುತ್ತಿದೆ ಎಂಬ ಚರ್ಚೆ ಇದೆ. ಕರ್ನಾಟಕ ಕೂಡ ಈ ವಿಷಯ ಎತ್ತಿದೆ. ಕೇಂದ್ರ ಆದಾಯ ಹೆಚ್ಚಿಸಲು ಇಂತಹ ತೀರ್ಮಾನ ಮಾಡುತ್ತಿದೆ ಎಂದು ಹೇಳಲಾಗುತ್ತದೆ. ನಾವು ಇದನ್ನು ಗಮನಿಸುತ್ತೇವೆ ಎಂದರು.
ಮುಂದುವರಿದ ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳುತ್ತಿವೆ. ನಗರೀಕರಣ ಹೆಚ್ಚಾಗುತ್ತಿದೆ, ಶಿಕ್ಷಣ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ಕೊಡುವ ಅಗತ್ಯವಿದೆ. ನಾವು ಮುಕ್ತವಾಗಿದ್ದೇವೆ. ಚರ್ಚೆ ಮಾಡಿ ಅಭಿಪ್ರಾಯ ಪಡೆದು ನಿರ್ಧಾರ ಮಾಡುತ್ತೇವೆ. ಯಾವ ಆಧಾರದಲ್ಲಿ ಪರಿಗಣಿಸಬಹುದೆಂದು ನೋಡಲು ಅವಕಾಶವಿದೆ. ನಾವು ಎಲ್ಲ ರೀತಿಯಲ್ಲಿ ಡೇಟಾ ಸಂಗ್ರಹಿಸುತ್ತೇವೆ. ಕ್ರೈಟೀರಿಯಾ ನಿಗದಿ ಮಾಡುವಾಗ ವೈವಿಧ್ಯಮಯವಾಗಿ ಯೋಚಿಸುತ್ತೇವೆ. 5ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ ಐದು ಸಾವಿರ ಕೋಟಿ ಕೊಡಬೇಕಾಗಿರುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ತಿಳಿಸಿದರು.