ಹಾಸನ: ನನಗೆ ಗರ್ವವೇ ಇಲ್ಲ, ಇನ್ನು ಭಂಗ ಹೇಗೆ ಮಾಡ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರನ್ನು ಉದ್ದೇಶಿಸಿ ಹೇಳಿದರು. ಬೇಲೂರು ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮಾತನಾಡಿದರೆ ನನಗೂ ಮೋದಿಗೆ ಅವಿನಾಭಾವ ಸಂಬಂಧವಿದೆ ಅನ್ನುತ್ತೀರಲ್ಲಾ? ಇವತ್ತು ಬೆಂಗಳೂರು ಮತ್ತು ಸುತ್ತಮತ್ತಲಿನ ಜನರಿಗೆ ನೀರಿನ ಅವಶ್ಯಕತೆಯಿದೆ. ಹಾಗಿದ್ದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ ಯಾಕೆ?, ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಮೇಕೆದಾಟು ಅನುಷ್ಠಾನಗೊಳಿಸುತ್ತೇವೆ ಎನ್ನುವ ನೀವು, ಈಗಲೇ ಅನುಮತಿ ಕೊಡಿಸಿ ಎಂದು ಸವಾಲು ಹಾಕಿದರು.
ದೇವೇಗೌಡರು, ಸಿದ್ದರಾಮಯ್ಯನಿಗೆ ಗರ್ವಭಂಗ ಮಾಡಿ ಅಂತ ಕರೆ ಕೊಡುತ್ತಾರೆ. ಆದರೆ ನನಗೆ ಗರ್ವವೇ ಇಲ್ಲ ಅಂದ ಮೇಲೆ ನನ್ನ ಭಂಗ ಹೇಗೆ ಮಾಡ್ತೀರಿ? ರಾಜ್ಯಕ್ಕೆ ಇಷ್ಟೆಲ್ಲಾ ಅನ್ಯಾಯವಾದರೂ ಏನೂ ಮಾಡದ ಸಂಸದರನ್ನು ದಯಮಾಡಿ ಸೋಲಿಸಿ, ಕಾಂಗ್ರೆಸ್ ಗೆಲ್ಲಿಸಿ ಎಂದು ಇದೇ ಸಂದರ್ಭದಲ್ಲಿ ಮತದಾರರಲ್ಲಿ ಮನವಿ ಮಾಡಿದರು.
ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ: ಕರ್ನಾಟಕದ ತೆರಿಗೆ ಆದಾಯದಲ್ಲಿ ಹೆಚ್ಚಳವಾಗಿದೆ. ಕರ್ನಾಟಕಕ್ಕೆ ಕೊಡಬೇಕಾದ ಹಣ ಕೊಟ್ಟಿಲ್ಲ. ಜೆಡಿಎಸ್ನವರು ರೈತರು, ನೀರಾವರಿ ಬಗ್ಗೆ ಮಾತನಾಡುತ್ತಾರೆ. 5,300 ಕೋಟಿಯನ್ನು ಕರ್ನಾಟಕಕ್ಕೆ ಕೊಡುವುದಾಗಿ ಹೇಳಿದರು. 25 ಮಂದಿ ಲೋಕಸಭಾ ಸದಸ್ಯರು ಕರ್ನಾಟಕದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿಲ್ಲ. ಹಾಸನದ ಪ್ರಜ್ವಲ್ ರೇವಣ್ಣ ಕೂಡ ರಾಜಕ್ಕಾಗಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಕರ್ನಾಟಕದಲ್ಲಿ ಬರಗಾಲ ಬಂದಿದೆ. 212 ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಕರ್ನಾಟಕಕ್ಕೆ ಅನ್ಯಾಯವಾದರೂ, ರಾಜ್ಯಸಭಾ ಸದಸ್ಯ ದೇವೇಗೌಡರು ಕೂಡ ಮಾತನಾಡಲಿಲ್ಲ. ಹೀಗಾಗಿ ಇಂತಹ ವ್ಯಕ್ತಿಗಳನ್ನು ಮತ್ತೆ ಲೋಕಸಭೆಗೆ ಕಳುಹಿಸಬೇಕಾ? ಯೋಚಿಸಿ ಮತಹಾಕಿ ಎಂದರು.
ದೇವೇಗೌಡರಿಗೆ ಡಿಕೆಶಿ ಎಚ್ಚರಿಕೆ: ಸರ್ಕಾರ ಬಿದ್ದು ಹೋಗಲಿಕ್ಕೆ ಅದೇನು ಮಡಿಕೆಯಲ್ಲ. ಪ್ರಜಾಪ್ರಭುತ್ವದಿಂದ ಗಟ್ಟಿಯಾಗಿರುವ ಗ್ಯಾರಂಟಿ ಸರ್ಕಾರ. ನಾವು ಮನಸ್ಸು ಮಾಡಿದ್ರೆ ಎಲ್ಲರನ್ನೂ ಪಕ್ಷದಿಂದ ಖಾಲಿ ಮಾಡಬಹುದು. ಸಿದ್ದರಾಮಯ್ಯನವರು ಸ್ವಲ್ಪ ತಡೀರಿ ಅಂತ ಹೇಳಿದ್ರು. ಹಾಗಾಗಿ ಸುಮ್ಮನಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೇವೇಗೌಡರ ಕುಟುಂಬಕ್ಕೆ ಬಹಿರಂಗ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಚುನಾವಣೆ ಬಳಿಕ ಸರ್ಕಾರ ಬಿದ್ದು ಹೋಗುತ್ತದೆ ಎಂದು ಗೌಡ್ರು ಹೇಳ್ತಾರೆ. ಸರ್ಕಾರ ಬಿದ್ದು ಹೋಗಲಿಕ್ಕೆ ಅದೇನು ಮಡಿಕೆನಾ? ಪ್ರಜಾಪ್ರಭುತ್ವದ ಮೂಲಕ ಮತದಾರರಾದ ನೀವು ಆಯ್ಕೆ ಮಾಡಿ 136 ಸೀಟು ಕೊಟ್ಟಿದ್ದೀರಿ. ಇದು ಗ್ಯಾರಂಟಿ ಸರ್ಕಾರ. 5 ವರ್ಷ ಪೂರ್ಣಗೊಳಿಸುತ್ತದೆ. ಈಗಾಗಲೇ ಅವರ ಪಕ್ಷದ ಎಲ್ಲಾ ಶಾಸಕರು ಖಾಲಿಯಾಗುತ್ತಿದ್ದಾರೆ. ಸಿದ್ದರಾಮಯ್ಯನವರು ಸ್ವಲ್ಪ ತಾಳ್ಮೆ ಇರಲಿ ಅಂತ ಹೇಳಿದ್ದಕ್ಕೆ ಸುಮ್ಮನಾಗಿದ್ದೇವೆ ಎಂದು ಆಪರೇಷನ್ ಹಸ್ತ ಬಗೆಗೂ ಮಾತನಾಡುವ ಎಚ್ಚರಿಕೆ ನೀಡಿದರು.
ಮೈತ್ರಿ ಮಾಡಿಕೊಂಡ ಬಳಿಕ ಜೆಡಿಎಸ್ ಗೆಲ್ಲಿಸೋಕೆ ಮತದಾರರು ರೆಡಿ ಇಲ್ಲ. ಕಾಂಗ್ರೆಸ್ ಪಕ್ಷ ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ಗೆದ್ದು ಬೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಡಿಕೆಶಿ, ಕಳೆದ ಬಾರಿ 25 ಸ್ಥಾನಗಳನ್ನು ಕೊಟ್ಟು ಬಿಜೆಪಿಯನ್ನು ಗೆಲ್ಲಿಸಿದ್ರಿ. ರಾಜ್ಯಕ್ಕೆ ಯಾವುದೇ ಅನುಕೂಲ ಮಾಡಿಕೊಡಲಿಲ್ಲ. ಈ ಬಾರಿ ಹಾಸನದಲ್ಲಿ ದೇವೇಗೌಡರ ಮೊಮ್ಮಗನನ್ನು ನಿಲ್ಲಿಸಿದ್ದಾರೆ. ನಮ್ಮ ಪಕ್ಷದಿಂದ ಟಗರು ನಿಲ್ಲಿಸಿದ್ದೇವೆ. ಈಗಾಗಲೇ ಆ ಕುಟುಂಬ ಎರಡು ಬಾರಿ ಸೋತಿದೆ. ಈ ಬಾರಿ ಮತ ಭಿಕ್ಷೆಯನ್ನು ತಾಯಿಯ ಸೆರಗಿಗೆ ಹಾಕುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ಅಭೂತಪೂರ್ವ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ತಾಯಿ ಅನುಪಮಾ ಮಹೇಶ್ ವೇದಿಕೆ ಮೇಲಿಂದ ಎದ್ದು ಸೆರಗೊಡ್ಡಿ ಮತಯಾಚನೆ ಮಾಡುವ ಮೂಲಕ ಮಗನನ್ನು ಗೆಲ್ಲಿಸಿ ಎಂಬ ಸೂಚನೆ ನೀಡಿದರು.
ಇದನ್ನೂಓದಿ: ಹೆಚ್.ಡಿ.ಕುಮಾರಸ್ವಾಮಿಗೆ ಮಹಿಳಾ ಆಯೋಗ ಜಾರಿಗೊಳಿಸಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ - H D Kumaraswamy