ಬೆಂಗಳೂರು: ಸಿಎಂ ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯಪಾಲರು ಬಿಜೆಪಿ ಸಂಚಿನ ಭಾಗವಾಗಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದರು.
ಕಾವೇರಿ ನಿವಾಸದಲ್ಲಿ ಸಚಿವರುಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ ಬಿಜೆಪಿಯ ಇತಿಹಾಸ ಗೊತ್ತು. ಕಳೆದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿರುವುದು ಬಿಜೆಪಿ ಹೈಕಮಾಂಡ್ ಸಂಚು ಎಂದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಈಗ ಅವರು ಕರ್ನಾಟಕ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಅವರದ್ದೇ ಜನರನ್ನು ರಕ್ಷಿಸಲು ಮುಂದಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಮಕ್ಕಳನ್ನು, ನಾಯಕರನ್ನು ರಕ್ಷಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅವರು ಚುನಾಯಿತ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಹೊಸ ಸಿಎಂ ಅಲ್ಲ. ಅವರ ರಾಜಕೀಯ ಜೀವನ ಎಲ್ಲರಿಗೂ ಗೊತ್ತು. ಅವರು ಹೇಗೆ ರಾಜಕೀಯ ಆರಂಭಿಸಿದರು, ಈಗ ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರ ಆದರ್ಶ, ಅವರ ಹಿನ್ನೆಲೆ ಎಲ್ಲವೂ ರಾಜ್ಯದ ಜನರಿಗೆ ಗೊತ್ತು. ಪಂಚ ಗ್ಯಾರಂಟಿ ಮೂಲಕ ಕಾಂಗ್ರೆಸ್ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿರುವ ಹಿನ್ನೆಲೆ ಬಿಜೆಪಿ - ಜೆಡಿಎಸ್ ಅವರಿಗೆ ತಮ್ಮ ರಾಜಕೀಯ ಭವಿಷ್ಯ ಅಪಾಯದಲ್ಲಿದೆ ಎಂಬುದು ಗೊತ್ತಾಗಿದೆ. ಹಾಗಾಗಿ ಅವರು ಪಿತೂರಿ ನಡೆಸಿ, ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
#WATCH | After the meeting with Karnataka Congress leaders earlier today, AICC General Secretary KC Venugopal says, " last congress-led jds-congress coalition government in the state had been completely distorted by the conspiracy of the bjp central leadership. they are framing… pic.twitter.com/ukXr8D1zoN
— ANI (@ANI) August 4, 2024
ರಾಜ್ಯದ ರಾಜ್ಯಪಾಲರು ಬಿಜೆಪಿ ಹೈಕಮಾಂಡ್ ಸಂಚಿನ ಭಾಗವಾಗಿದ್ದಾರೆ. ಸಿಎಂಗೆ ಶೋಕಾಸ್ ನೋಟಿಸ್ ಕಳುಹಿಸಿ ಸರ್ಕಾರ ಅಸ್ಥಿರವಾಗಲಿದೆ ಎಂಬ ಭಾವನೆ ಮೂಡಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ನ ಸಂಚಿನ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದೆ. ಸಚಿವರಿಗೆ ಜಿಲ್ಲೆಗಳು, ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಸಂಚಿನ ಬಗ್ಗೆ ಮನವರಿಕೆ ಮಾಡಲು ತಿಳಿಸಲಾಗಿದೆ. ಸರ್ಕಾರವನ್ನು ಅಸ್ಥಿರಗೊಳಿಸಿ ಗ್ಯಾರಂಟಿಯನ್ನು ಮುಗಿಸಲು ಯತ್ನಿಸುತ್ತಿರುವ ಬಗ್ಗೆ ರಾಜ್ಯದ ಜನರಿಗೆ ಸತ್ಯ ಹೇಳಲು ಸೂಚಿಸಿದ್ದೇವೆ. ನಾವು ಸಭೆಯಲ್ಲಿ ಪಂಚ ಗ್ಯಾರಂಟಿ ಮುಂದುವರಿಸಲು ನಿರ್ಧರಿಸಿದ್ದೇವೆ. ಗ್ಯಾರಂಟಿ ಅನುಷ್ಠಾನ ಮಾಡಿರುವ ಸರ್ಕಾರದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ತಿಳಿಸಿದರು.
ವಿಜಯೇಂದ್ರನ ಮೇಲೆ ಎಷ್ಟು ಪ್ರಕರಣಗಳಿವೆ: ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಒಂದು ದೊಡ್ಡ ಜೋಕ್ ಆಗಿದೆ. ವಿಜಯೇಂದ್ರನ ಮೇಲೆ ಎಷ್ಟು ಪ್ರಕರಣಗಳಿವೆ?. ಪ್ರಜ್ವಲ್ ರೇವಣ್ಣನ ಮೇಲೆ ಎಷ್ಟು ಪ್ರಕರಣಗಳಿವೆ?. ಈಗ ಅವರು ನಾವು ಅತಿ ಪ್ರಮಾಣಿಕ ವ್ಯಕ್ತಿಗಳು ಎಂದು ಬಿಂಬಿಸಲು ಮುಂದಾಗಿದ್ದಾರೆ. ಅವರು ಈಗ ಸಿಎಂ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್ ಉದ್ದೇಶ ನಮಗೆ ಗೊತ್ತಿದೆ. ಕರ್ನಾಟಕ ರಾಜ್ಯದ ಜನರ ಜೊತೆ ನಿಂತಿರುವ ವ್ಯಕ್ತಿಯನ್ನು ಮುಗಿಸಲು ಬಿಜೆಪಿಯವರು ಹೊರಟಿದ್ದಾರೆ. ನಾವು ಭಯ ಪಡುತ್ತಿಲ್ಲ. ಅವರು ಕಾನೂನು ಹೋರಾಟ ಮಾಡಲಿ. ಆದರೆ ಪ್ರತಿನಿತ್ಯ ಸಿದ್ದರಾಮಯ್ಯ ಭ್ರಷ್ಟ ಎಂಬುದನ್ನು ಬಿಂಬಿಸಲು ಯತ್ನಿಸುವ ಮೂಲಕ ಅವರು ಗ್ಯಾರಂಟಿ ಯೋಜನೆಗಳನ್ನು, ಸಿಎಂ ಸಿದ್ದರಾಮಯ್ಯರನ್ನು ಗುರಿಯಾಗಿಸುತ್ತಿದ್ದಾರೆ ಎಂದು ದೂರಿದರು.
ಇದೇ ವೇಳೆ ಸಚಿವರ ಕಾರ್ಯಕ್ಷಮತೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು. ಬಿಜೆಪಿ ಸಂಚಿನ ಬಗ್ಗೆ ನಾವು ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ನೋ ರೀ ಶಫಲ್, ಯಾವುದೇ ಶಫಲ್ ಇಲ್ಲ, ಚೀಫ್ ಮಿನಿಸ್ಟರ್ ಹೇಳುತ್ತಿದ್ದೇನೆ: ಸಿಎಂ ಸಿದ್ದರಾಮಯ್ಯ - CM Siddaramaiah