ಮೈಸೂರು : ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಮಧ್ಯಾಹ್ನ 1:55ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.
ಸಿಎಂ ಸಿದ್ದರಾಮಯ್ಯಗೆ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್, ಸಚಿವರಾದ ಹೆಚ್. ಸಿ ಮಹದೇವಪ್ಪ, ಶಿವರಾಜ ತಂಗಡಗಿ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಕೆಲ ಶಾಸಕರು ಸಾಥ್ ನೀಡಿದರು.
ಪೂಜೆ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾಡಿನ ಎಲ್ಲ ಜನತೆಗೆ ವಿಜಯದಶಮಿಯ ಶುಭಾಶಯ ಕೋರಲು ಬಯಸುತ್ತೇನೆ. ಈ ಹಬ್ಬ ವಿಶೇಷವಾಗಿ ದುಷ್ಟ ಶಕ್ತಿಗಳ ಸಂಹಾರ, ಶಿಷ್ಟ ಶಕ್ತಿಗಳ ರಕ್ಷಣೆ ಮಾಡುವುದಾಗಿದೆ ಎಂದರು.
ಕಳೆದ ಬಾರಿ ಬರಗಾಲ ಇದ್ದಿದ್ದರಿಂದ ಈ ಬಾರಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ, ಜನರ ಹಬ್ಬವಾಗಿ, ನಾಡಹಬ್ಬವಾಗಿ ದಸರಾವನ್ನು ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಅವರಿಗೆ ಹೇಳಿದ್ದೆ. ಅದರಂತೆ ಈ ಬಾರಿ ಚೆನ್ನಾಗಿ ನಾಡಹಬ್ಬವಾಗಿದೆ ಎಂದರು.
ರೈತರ ಮುಖದಲ್ಲಿ ಮಂದಹಾಸ: ಮಳೆ, ಬೆಳೆ ಈ ಬಾರಿ ಚೆನ್ನಾಗಿ ಆಗಿದೆ. ಎಲ್ಲ ಕಡೆ ಮಳೆಯಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ. ಎಲ್ಲ ಜಲಾಶಯಗಳು ಕೂಡಾ ತುಂಬಿವೆ. ನೀರಾವರಿ ಜಲಾಶಯಗಳು ತುಂಬಿವೆ. ಹೀಗಾಗಿ, ರೈತರ ಮುಖದಲ್ಲಿ ಮಂದಹಾಸ ಇದೆ ಎಂದು ಹೇಳಿದರು.
ಮಳೆ ನಡುವೆಯೂ ಜಂಬೂ ಸವಾರಿ: ಸಿಎಂ ಚಾಲನೆ ನೀಡಿದ ಬಳಿಕ ಮಳೆಯನ್ನು ಲೆಕ್ಕಿಸದೆ ಸ್ತಬ್ಧಚಿತ್ರಗಳ ಮೆರವಣಿಗೆ ಸಾಗಿದೆ.
ಇದನ್ನೂ ಓದಿ : Jamboo Savari 2024: ಬನ್ನಿ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್: ದಸರಾ ಜಂಬೂ ಸವಾರಿಗೆ ಕ್ಷಣಗಣನೆ