ಮೈಸೂರು: ತಮಿಳುನಾಡಿಗೆ ನೀರು ಬಿಡಬೇಕಾಗಿ ಬಂದಾಗ ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸೋಮವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಬಿಚ್ಚನ ಹಳ್ಳಿ ಬಳಿಯಿರುವ ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರುಗಳು ಬಾಗಿನ ಅರ್ಪಿಸಿದರು. ಕೆಆರ್ಎಸ್ಗೆ ಬಾಗಿನ ಅರ್ಪಿಸಿದ ಬಳಿಕ, ಕಬಿನಿ ಜಲಾಶಯಕ್ಕೆ ಆಗಮಿಸಿದ ಗಣ್ಯರು, ಡ್ಯಾಂಗೆ ಪೂಜೆ ಸಲ್ಲಿಸಿ ಧನುರ್ ಲಗ್ನದಲ್ಲಿ ಬಾಗಿನ ಸಮರ್ಪಿಸಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ''ಕಬಿನಿ ಜಲಾಶಯ ನಮ್ಮೆಲ್ಲರ ಮರ್ಯಾದೆ ಉಳಿಸಿದೆ. ಈ ಹಿಂದೆ ತಮಿಳುನಾಡಿಗೆ ನೀರು ರಿಲೀಸ್ ಮಾಡಬೇಕಿತ್ತು. ಆಗ ಕಬಿನಿ ಜಲಾಶಯದಿಂದ ನೀರನ್ನು ಬಿಡಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾವು ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದೇವೆ. ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ'' ಎಂದರು.
ನಾಲ್ಕು ಜಲಾಶಯಗಳು ಭರ್ತಿ ಎಂದ ಸಿಎಂ ಸಿದ್ದರಾಮಯ್ಯ: ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ''ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಭಾಗದ ಕೆಆರ್ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ನಿತ್ಯ ಒಂದು ಟಿಎಂಸಿಯಂತೆ ತಮಿಳುನಾಡಿಗೆ ಒಟ್ಟು 47 ಟಿಎಂಸಿ ನೀರು ಬಿಡಬೇಕು ಎಂಬ ಆದೇಶ ಮಾಡಲಾಗಿದೆ. ಇದೀಗ ತಮಿಳುನಾಡಿಗೆ 80 ಟಿಎಂಸಿಗೂ ಹೆಚ್ಚು ನೀರು ಹರಿಬಿಡಲಾಗಿದೆ. ರಾಜ್ಯದ 66 ಲಕ್ಷ ಹೆಕ್ಟೇರ್ನಲ್ಲಿ ಭತ್ತದ ಬಿತ್ತನೆ ಮಾಡಲಾಗಿದೆ. ನಾಡಿನಲ್ಲಿ ಉತ್ತಮ ಮಳೆಯಾಗಿದ್ದು, ಸಮೃದ್ಧಿಯಿಂದ ಕೂಡಿದೆ'' ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಂಡ್ಯ: ಕೆಆರ್ಎಸ್ ಭರ್ತಿ, ಕಾವೇರಿಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ - bagina to krs dam