ಕಾರವಾರ: ''ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೇ ಸಾರ್ವಜನಿಕರಿಂದ ಟೋಲ್ ಏಕೆ ಕಲೆಕ್ಟ್ ಮಾಡುತ್ತಿದ್ದೀರಿ, ಇದು ಸರಿಯಿಲ್ಲ. ಕಾಮಗಾರಿಯನ್ನು 2016ಕ್ಕೆ ಮುಕ್ತಾಯಗೊಳಿಸಬೇಕಿದ್ದರೂ ಸಹ ಇದುವರೆಗೆ ಆಗಿಲ್ಲ. ಈ ಕಾಮಗಾರಿ ಬಗ್ಗೆ ಕೇಂದ್ರ ಸಚಿವರಿಗೂ ಮಿಸ್ ಲೀಡಿಂಗ್ ಮಾಡುವುದಲ್ಲದೆ, ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡುತ್ತಿದ್ದೀರಿ'' ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.
ಭಾನುವಾರ ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ''ಇಲ್ಲಿ ರಸ್ತೆ ಮಾಡಲು ನಮ್ಮ ಜಾಗ ನೀಡಿದ್ದೇವೆ, ನೀರು ನೀಡಿದ್ದೇವೆ. ನೀವು ಹೇಳಿದ ಹಾಗೆ ಕೇಳುವುದಕ್ಕೆ ನಾವಿಲ್ಲ. ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಇಲ್ಲಿ ಸಂಭವಿಸಬಹುದಾದ ಗುಡ್ಡ ಕುಸಿತದಂತಹ ಅನಾಹುತಗಳ ಬಗ್ಗೆ ವೈಜ್ಞಾನಿಕ ವರದಿ ಪಡೆದಿದ್ದೀರಾ?'' ಎಂದು ಪ್ರಶ್ನಿಸಿದ ಸಿಎಂ, ಹೆದ್ದಾರಿ ಕಾಮಗಾರಿ ಕುರಿತಂತೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು, ರಾಜ್ಯ ಸರ್ಕಾರದಿಂದ ಕೇಂದ್ರ ಹೆದ್ದಾರಿ ಸಚಿವರಿಗೆ ಪತ್ರ ಬರೆಯುವುದಾಗಿ ಹೇಳಿದರು.
ಪ್ರಸ್ತುತ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಿದ್ಧಪಡಿಸಿರುವ ಜಿಲ್ಲೆಯ ಗುಡ್ಡ ಕುಸಿತ ಪ್ರದೇಶಗಳ ಕುರಿತ ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಪರಿಶೀಲಿಸಿ, ಹೆದ್ದಾರಿಯಾದ್ಯಂತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ವಿದ್ಯುತ್ ಕಂಬಗಳಿಗೆ ಹಾನಿಯಾಗಿ ಉಂಟಾದ ಸಮಸ್ಯೆಯನ್ನು ಹೆಸ್ಕಾಂ ವತಿಯಿಂದ ಬೇಗ ಸರಿಪಡಿಸಬೇಕು. ಹೆಸ್ಕಾಂ ಅಧಿಕಾರಿಗಳು ಅಲರ್ಟ್ ಆಗಿದ್ದು, ತಕ್ಷಣ ಸ್ಪಂದಿಸಬೇಕು. ವಿದ್ಯುತ್ ಜನರೇಟ್ ಮಾಡುವ ಜಿಲ್ಲೆಯಾಗಿದ್ದು, ವಿಸ್ತೀರ್ಣ ಕೂಡ ದೊಡ್ಡದಾಗಿದೆ. ಇಲ್ಲಿಗೆ ಹೆಚ್ಚಿನ ಸಿಬ್ಬಂದಿ ನೀಡಲಾಗುವುದು ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಮುಂದಿನ ದಿನಗಳಲ್ಲಿ ಇನ್ನೂ ಕೂಡ ಮಳೆಯಾಗುವ ಸಾಧ್ಯತೆಗಳಿದ್ದು, ಗುಡ್ಡ ಕುಸಿತ ಸೇರಿದಂತೆ ಯಾವುದೇ ರೀತಿಯ ಅಪಾಯವಾಗದಂತೆ ಜಿಲ್ಲಾಡಳಿತದಿಂದ ಎಲ್ಲ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಪ್ರದೇಶಗಳಲ್ಲಿನ ಗ್ರಾಮಗಳನ್ನು ಗುರುತಿಸಿ, ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿಕೊಂಡು, ಅಲ್ಲಿನ ಪರಿಸ್ಥಿತಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಆಗಿರುವ ಹಾನಿಯ ಕುರಿತಂತೆ ಶೀಘ್ರದಲ್ಲಿ ವರದಿ ಸಿದ್ಧಪಡಿಸಿ, ಶೀಘ್ರದಲ್ಲಿ ಪರಿಹಾರ ಒಗದಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮಳೆಯಿಂದಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದವರು ಪುನಃ ತಮ್ಮ ಮನೆಗಳಿಗೆ ತೆರಳುವಾಗ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡುವಂತೆ ಕೋರಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಮನವಿಗೆ, 'ಆಯ್ತು.. ಈ ಬಗ್ಗೆ ನೋಡೋಣ' ಎಂದು ಸಿಎಂ ಪ್ರತಿಕ್ರಿಯಿಸಿದರು.
ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ನೆಲೆ ಕಲ್ಪಿಸುವ ಮೂಲಕ ಪರಿಹಾರ ಒದಗಿಸುವ ಬಗ್ಗೆ ಶಾಸಕ ಸತೀಶ್ ಸೈಲ್ ಅವರು ಕೋರಿದರು. 'ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳೋಣ' ಎಂದು ಸಿಎಂ ಭರವಸೆ ನೀಡಿದರು.
ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.