ಬೆಂಗಳೂರು: ಭ್ರಷ್ಟಾಚಾರ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಗೌರವದಿಂದ ರಾಜ್ಯಕ್ಕೆ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷದ ಮುಖ್ಯಮಂತ್ರಿ ಹುದ್ದೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದರೂ ಅವರ ಮೇಲೆ ಕ್ರಮವಿಲ್ಲ. ದಿನ ಬೆಳಗಾದರೆ ಭ್ರಷ್ಟಾಚಾರದ ಆರೋಪದ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಶಾಸಕರ ವಿರುದ್ಧ ಯಾವ ಕ್ರಮವೂ ಇಲ್ಲ. ನರೇಂದ್ರ ಮೋದಿ ಅವರೇ ಈ ಮೌನಕ್ಕೆ, ಈ ನಿಷ್ಕ್ರೀಯತೆಗೆ ಏನು ಕಾರಣ? ಈ ಭ್ರಷ್ಟಾಚಾರದಲ್ಲಿ ನೀವೂ ಭಾಗೀದಾರರೆಂದು ತಿಳಿದುಕೊಳ‍್ಳಬಹುದೇ? ಎಂದು ಹೇಳಿದ್ದಾರೆ.
Prime Minister @NarendraModi, who is accused by his own party leaders of auctioning off the Chief Minister's post for ₹2,500 crores, has no moral right to speak about corruption!
— Siddaramaiah (@siddaramaiah) September 25, 2024
Even after a BJP MLA openly accused his own party of selling the CM post, no action has been taken.…
ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೆ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು ಎಂದು ಸಿಎಂ ಮಾಧ್ಯಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ಕಳೆದ ಹನ್ನೊಂದು ವರ್ಷಗಳಲ್ಲಿ ನಿರಂತರವಾಗಿ ನಿಮ್ಮ ಕಾರ್ಯಾಲಯದ ವಾಷಿಂಗ್ ಮಷಿನ್ ಕೆಲಸ ಮಾಡುತ್ತಿರುವುದನ್ನು ದೇಶ ಗಮನಿಸುತ್ತಿದೆ. ನಿಮ್ಮಿಂದಲೇ ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ವಿರೋಧ ಪಕ್ಷಗಳ ನಾಯಕರನ್ನೆಲ್ಲ ವಾಷಿಂಗ್ ಮಷಿನ್ನಲ್ಲಿ ಹಾಕಿ ಪರಮ ಪ್ರಾಮಾಣಿಕರನ್ನಾಗಿ ಮಾಡುತ್ತಿರುವ ನಿಮ್ಮ ಚಾಕಚಕ್ಯತೆಗೆ ಶಹಬ್ಬಾಶ್ ಅನ್ನಲೇ ಬೇಕು. ಅಧಿಕೃತ ಮಾಹಿತಿಯ ಪ್ರಕಾರವೇ 2014ರಿಂದ ಇಲ್ಲಿಯವರೆಗೆ ಭ್ರಷ್ಟಾಚಾರದ ಆರೋಪ ಹೊತ್ತಿರುವ 25 ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರಿದ್ದಾರೆ. ಇವರಲ್ಲಿ 23 ನಾಯಕರನ್ನು ಭ್ರಷ್ಟಾಚಾರದ ಆರೋಪಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಮುಕ್ತಗೊಳಿಸಿವೆ. ಹಿಮಂತಾ ಶರ್ಮಾ, ಸುವೇಂದು ಅಧಿಕಾರಿ, ಹೆಚ್.ಡಿ.ಕುಮಾರಸ್ವಾಮಿ, ಅಜಿತ್ ಪವಾರ್, ಅಶೋಕ್ ಚವ್ಹಾಣ್, ನಾರಾಯಣ ರಾಣೆ, ಪ್ರತಾಪ್ ಸರ್‌ನಾಯಕ್ ಅವರಿಂದ ಹಿಡಿದು ಇತ್ತೀಚಿನ ಏಡ್ಸ್ ಟ್ರ್ಯಾಪ್ ಗಿರಾಕಿ ಮುನಿರತ್ನವರೆಗೆ ಎಷ್ಟೊಂದು ಭ್ರಷ್ಟರನ್ನು ವಾಷಿಂಗ್ ಮಷಿನ್ನಲ್ಲಿ ತೊಳೆದು ನೀವು ಕ್ಲೀನ್ ಮಾಡಿಲ್ಲ? ಇವೆಲ್ಲ ಕೇವಲ ಧರ್ಮಾರ್ಥ ಸೇವೆಯೇ? ಎಂದು ಸಿಎಂ ಕೇಳಿದ್ದಾರೆ.
ನಿಮ್ಮ ಪಕ್ಷದ ಖಜಾನೆಗೆ ಸಂದಾಯವಾಗಿರುವ ಚುನಾವಣಾ ಬಾಂಡ್ಗಳ ಹಿಂದಿನ ಕೊಡುಗೈ ದಾನಿಗಳು ಯಾರು? ಅವರು ಕೊಟ್ಟದ್ದೆಷ್ಟು? ಅದಕ್ಕಾಗಿ ಅವರು ಪಡೆದದ್ದೆಷ್ಟು? ಎನ್ನುವುದು ಇಂದು ದೇಶದ ಜನರ ಕಣ್ಣ ಮುಂದಿದೆ. ನಿಮ್ಮ ಹನ್ನೊಂದು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ಲೂಟಿಗೈದವರು ದೇಶ ಬಿಟ್ಟು ಓಡಿಹೋಗಲು ದಾರಿ ಮಾಡಿಕೊಟ್ಟವರು ಯಾರು? ಅದಾನಿ-ಅಂಬಾನಿ ಅವರ ಸಂಪತ್ತು ಎಷ್ಟು ಪಟ್ಟು ಹೆಚ್ಚಾಯಿತು? ಬಡವರ ಗಳಿಕೆ ಎಷ್ಟು ಪಟ್ಟು ಕಡಿಮೆಯಾಯಿತು?. ನೀವು ಭ್ರಷ್ಟಾಚಾರದ ಬಗ್ಗೆ ಚರ್ಚೆ ಪ್ರಾರಂಭಿಸಿರುವುದನ್ನು ನೋಡಿ ಸಂತೋಷವಾಯಿತು. ನನ್ನ ವಿರುದ್ಧ ಭ‍್ರಷ್ಟಾಚಾರದ ಸುಳ್ಳು ಆರೋಪಗಳನ್ನು ಮಾಡಿ ಕುಣಿದಾಡುತ್ತಿರುವ ಪಾತ್ರಧಾರಿಗಳನ್ನಷ್ಟೇ ರಾಜ್ಯದ ಜನ ನೋಡಿದ್ದಾರೆ. ಈಗ ಇದರ ಹಿಂದಿರುವ ಸೂತ್ರಧಾರಿ ಯಾರು ಎನ್ನುವುದು ಕೂಡಾ ಜನರಿಗೆ ಗೊತ್ತಾಗಲಿ. ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆ ಮಾಡಲು ನೀವು ಸಿದ್ಧವಿದ್ದರೆ ನಾನು ಸದಾ ಸಿದ್ಧ ಎಂದು ಸಿಎಂ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಎಲ್ಲ ಶಾಸಕರು ಸಿಎಂ ಬೆನ್ನಿಗೆ ಇದ್ದೇವೆ: ಸಚಿವರ ಬೆಂಬಲ - MUDA Case