ಗಂಗಾವತಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತರೂ ದೊಡ್ಡ ಪ್ರಮಾಣದ ಮತ ಗಳಿಸಿರುವ ಮಾಜಿ ಸಚಿವ ಹಾಗು ಅಲ್ಪಸಂಖ್ಯಾತರ ಸಮುದಾಯದ ಪ್ರಭಾವಿ ನಾಯಕ ಇಕ್ಬಾಲ್ ಅನ್ಸಾರಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಕನಕಗಿರಿ ಉತ್ಸವ ಉದ್ಘಾಟಿಸಿದ ಸಿದ್ದರಾಮಯ್ಯ, ಬಳಿಕ ಗಂಗಾವತಿ ಮಾರ್ಗವಾಗಿ ಹೊಸಪೇಟೆಗೆ ತೆರಳುತ್ತಿರುವ ಸಂದರ್ಭದಲ್ಲಿ ಇಕ್ಬಾಲ್ ಅನ್ಸಾರಿ ನಿವಾಸಕ್ಕೆ ಭೇಟಿ ನೀಡಿದರು.
ಬಳಿಕ ಮಾತನಾಡಿದ ಸಿಎಂ, "ಅನ್ಸಾರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಿ ಗೌರವಿಸಲಾಗುವುದು. ಅವರ ಬೆನ್ನಿಗೆ ದೊಡ್ಡ ಪ್ರಮಾಣದ ಜನ ಬೆಂಬಲವಿದೆ. ಅವರು ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ. ಅವರ ಶಕ್ತಿಯನ್ನು ಸರ್ಕಾರ ಮತ್ತು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲಾಗುವುದು" ಎಂದರು.
ಅನ್ಸಾರಿಯನ್ನು ಎಂಎಲ್ಸಿ ಮಾಡಿ ಎಂದು ಬೆಂಬಲಿಗರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಸೂಕ್ತ ಸ್ಥಾನಮಾನ ನೀಡಲಾಗುವುದು" ಎಂದು ಹೇಳಿದರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯಗೆ ಮೈಸೂರು ಪೇಟ ತೊಡಿಸಿ ಶ್ರೀಗಂಧದ ಹಾರ ಹಾಕಿ ಸನ್ಮಾನಿಸಿದರು.
ಅನ್ಸಾರಿ ಅವರ 2 ವರ್ಷದ ಮೊಮ್ಮಗಳೊಂದಿಗೆ ಸಿಎಂ ಕೆಲಕಾಲ ಆಟವಾಡಿದರು. ಇದನ್ನು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಅನ್ಸಾರಿ ಮನೆಯಲ್ಲಿ ನನ್ನೆಡೆಗೆ ಓಡಿ ಬಂದ ಪುಟ್ಟ ಮಗುವಿನ ಜೊತೆ ಕಾಲ ಕಳೆದ ಒಂದಿಷ್ಟು ಕ್ಷಣಗಳು ದಿನದ ದಣಿವೆಲ್ಲವನ್ನೂ ಮರೆಸಿತು' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಾಳುಬಿದ್ದ ಕೃಷಿ ಭೂಮಿ ಪುನಶ್ಚೇತನಕ್ಕೆ ಮಸೂದೆ ತರಲು ಆಡಳಿತ ಸುಧಾರಣಾ ಆಯೋಗ ಶಿಫಾರಸು
'ನಂಬಿಕೆ ದ್ರೋಹದ ಬಗ್ಗೆ ವಿವರಿಸಿದ್ದೇನೆ': ಸಿಎಂ ಭೇಟಿ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ''2023ರ ವಿಧಾನಸಭಾ ಚುನಾವಣೆಯಲ್ಲಿ ನನಗಾದ ನಂಬಿಕೆ ದ್ರೋಹ, ವಂಚನೆ ಹಾಗೂ ನಮ್ಮದೇ ಪಕ್ಷದ ನಾಯಕರು ಹೆಣೆದ ಷಡ್ಯಂತ್ರ ಜಾಲದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಳೆಎಳೆಯಾಗಿ ವಿವರಿಸಲಾಗಿದೆ'' ಎಂದು ತಿಳಿಸಿದರು.
''ಸಿದ್ದರಾಮಯ್ಯ ನಮ್ಮ ನಿವಾಸಕ್ಕೆ ಬರುವ ಮಾರ್ಗ ಮಧ್ಯದಲ್ಲಿ ಅವರದ್ದೇ ವಾಹನದಲ್ಲಿ ನಾನು ಬಂದಿದ್ದು, ಕಳೆದ ಚುನಾವಣೆಯ ಸಂದರ್ಭದಲ್ಲಿ ಯಾರೆಲ್ಲ ವಂಚನೆ ಮಾಡಿದ್ದಾರೆ ಎಂಬುದರ ಬಗ್ಗೆ ಸಿಎಂ ಗಮನಕ್ಕೆ ತಂದಿರುವೆ. ನನ್ನ ಜೊತೆಗಿದ್ದು ವಂಚನೆ ಮಾಡಿದವರು, ನಾನು ಬೆಳೆಸಿದವರೇ ಮೇಲ್ನೋಟಕ್ಕೆ ನಮ್ಮ ಪಕ್ಷದಲ್ಲಿದ್ದುಕೊಂಡು ಒಳಗೊಳಗೆ ರೆಡ್ಡಿಗೆ ಬೆಂಬಲ ನೀಡಿರುವುದು ಸೇರಿದಂತೆ ಜಿಲ್ಲೆಯ ಕೆಲ ಕಾಂಗ್ರೆಸ್ ನಾಯಕರು ಮಾಡಿರುವ ವಂಚನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ'' ಎಂದು ಹೇಳಿದರು.
ನಗರದ ಬೈಪಾಸ್ ರಸ್ತೆಯಲ್ಲಿ ಕೆಲವರು ಕಾಂಗ್ರೆಸ್ ಕಚೇರಿ ಆರಂಭಿಸುತ್ತಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ''ಒಂದಲ್ಲ ಇನ್ನೂ ಹತ್ತು ಅಂತಹ ಕಚೇರಿ ಆರಂಭಿಸಿದರೂ ನನಗೇನು ಹಾನಿಯಿಲ್ಲ. ಅವೆಲ್ಲ ಮೇಲ್ನೋಟಕ್ಕೆ ಕಾಂಗ್ರೆಸ್ ಕಚೇರಿ ಎಂದು ಕರೆಯಿಸಿಕೊಳ್ಳುತ್ತವೆ. ಆದರೆ, ಅಲ್ಲಿ ಎಲ್ಲರೂ ಕೆಆರ್ಪಿಪಿ ಪಕ್ಷದವರು ಇರುತ್ತಾರೆ'' ಎಂದು ವ್ಯಂಗ್ಯವಾಡಿದ ಅನ್ಸಾರಿ, ''ಕಾಂಗ್ರೆಸ್ ಪಕ್ಷ ಏನಿದ್ದರೂ ಅನ್ಸಾರಿಯಿಂದ ಸಂಘಟನೆಯಾಗುತ್ತದೆ. ಅನ್ಸಾರಿಯನ್ನು ಮಾತ್ರ ಪಕ್ಷದ ಕಾರ್ಯಕರ್ತರು ನಂಬುತ್ತಾರೆ'' ಎಂದರು.
''2023ರ ಚುನಾವಣೆ ಸೋಲಿನಿಂದ ಧೃತಿಗೆಡುವ ಪ್ರಶ್ನೆಯೇ ಇಲ್ಲ. ನನ್ನದು ಮತ್ತೆ ಪುಟಿದೇಳುವ ಮನಸ್ಥಿತಿ. ಕಾಲ ಒಂದೇ ತೆರನಾಗಿರುವುದಿಲ್ಲ, ಉರುಳುತ್ತಲೇ ಇರುತ್ತದೆ'' ಎಂದು ತಿರುಗೇಟು ನೀಡಿದರು.