ಬೆಂಗಳೂರು: ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡುವ ವೇಳೆಯಲ್ಲಿಯೂ ಪಾಕಿಸ್ತಾನ ಪರ ಘೋಷಣೆ ವಿಷಯ ಪ್ರಸ್ತಾಪವಾಯಿತು. ಸಿಎಂ ಉತ್ತರಕ್ಕೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ಇದರಿಂದ ಕೆರಳಿದ ಸಿಎಂ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಕಟು ಶಬ್ದಗಳಿಂದ ಟೀಕಿಸಿದರು. ನಂತರ ಬಿಜೆಪಿಯವರ ಮೊಂಡುತನಕ್ಕೆ ಉತ್ತರ ಕೊಡಲಾಗಲ್ಲ, ಸದಸ್ಯರಿಗೆ ಉತ್ತರ ಮಂಡಿಸುತ್ತೇನೆ ಎಂದು ಬಜೆಟ್ ಲೇಖಾನುದಾನಕ್ಕೆ ಅನುಮತಿ ಕೊಡಿ ಎನ್ನುತ್ತಾ ಸಿಎಂ ಉತ್ತರ ಮುಗಿಸಿದರು. ಬಳಿಕ ಪ್ರತಿಪಕ್ಷಗಳ ಗದ್ದಲದ ನಡುವೆ ಪೂರಕ ಅಂದಾಜುಗಳಿಗೆ ಸದನ ಒಪ್ಪಿಗೆ ನೀಡಿತು.
ವಿಧಾನ ಪರಿಷತ್ನ ವಿತ್ತೀಯ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು. ಸಿಎಂ ಉತ್ತರದ ನಡುವೆ ಕೋಟಾ ಶ್ರೀನಿವಾಸ ಪೂಜಾರಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಅಸಮಾಧಾನಗೊಂಡ ಸಿಎಂ, ಇಂತಹದ್ದಕ್ಕಾಗಿಯೇ ಜನ ನಿಮ್ಮನ್ನು ತಿರಸ್ಕಾರ ಮಾಡಿ ಅಲ್ಲಿ ಕೂರಿಸಿದ್ದಾರೆ ಎಂದರು. ಗದ್ದಲದ ನಡುವೆ ಸಿಎಂ ಉತ್ತರ ನೀಡಲು ಆರಂಭಿಸಿದರು. ಪಾಕ್ ಪರ ಘೋಷಣೆಗೆ ಸಿಎಂ ಉತ್ತರ ನೀಡಬೇಕು ಎಂದು ಬಿಜೆಪಿ, ಜೆಡಿಎಸ್ ಪಟ್ಟು ಹಿಡಿಯಿತು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ ಆಡಳಿತ -ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.
ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ: ಗದ್ದಲದಲದ ನಡುವೆ ಉತ್ತರ ನೀಡಿದ ಸಿಎಂ, ಏಳು ಕೋಟಿ ಕನ್ನಡಿಗರಿಗಾಗಿ ಸರ್ಕಾರ ಇದೆ. ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಲು, ಸಮಾಜದಲ್ಲಿ ಅವಕಾಶವಂಚಿತ ಜನ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತ ಎಲ್ಲರಿಗೂ ಕೂಡ ಆರ್ಥಿಕ, ಸಾಮಾಜಿಕ ಶಕ್ತಿ ಕೊಡುವುದು ನಮ್ಮ ಸರ್ಕಾರದ ಕರ್ತವ್ಯ. ಬಡವರ ವಿರೋಧಿ ಶ್ರೀಮಂತರ ಪರ ಬಿಜೆಪಿಗರು. ನಾವು ಸಾಮಾಜಿಕ ನ್ಯಾಯದ ಪರ ಇರುವವರು. ಸಂವಿಧಾನ ಜಾರಿಯಾದಾಗಲೂ ವಿರೋಧ ಮಾಡಿದ್ದರು. ಐದು ಗ್ಯಾರಂಟಿ ಘೋಷಣೆ ಮಾಡಿದ್ದಾಗ ಜಾರಿ ಅಸಾಧ್ಯ ಎಂದು ಮೋದಿ ಹೇಳಿದ್ದರು. ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗಲಿದೆ ಎಂದಿದ್ದರು. ಆದರೆ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ ಎಂದರು.
ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅನುದಾನಕ್ಕೆ ಕೇಂದ್ರದ ಎದುರು ಭಿಕ್ಷೆ ಕೇಳಬೇಕಾ? ಎಂದಿದ್ದರು. ಈಗ ನಮಗೆ ಅನುದಾನ ಕೊಡುತ್ತಿಲ್ಲ. ಇದನ್ನು ಬಿಜೆಪಿಯವರು ಕೇಳಲು ಧೈರ್ಯವಿಲ್ಲ. ಇವರು ಒಮ್ಮೆಯೇ ಜನರಿಂದ ಬಹುಮತ ಪಡೆದು ಅಧಿಕಾರ ನಡೆಸಲಿಲ್ಲ. ಬಿಜೆಪಿಯವರು ಶಾಸಕರಿಗೆ ಹಣ ಕೊಟ್ಟು ಕೊಂಡುಕೊಂಡು ಸರ್ಕಾರ ಮಾಡಿದರು. 2008ರಲ್ಲಿ ಬಹುಮತ ಇರಲಿಲ್ಲ. 2018ರಲ್ಲೂ ಇರಲಿಲ್ಲ. 2023ರಲ್ಲಿ ಇವರು ಅಧಿಕಾರ ಕಳೆದುಕೊಂಡರು. ಹಿಂಬಾಗಿಲ ಮೂಲಕ ಬಂದು ಅಧಿಕಾರ ನಡೆಸಲು ನಾಚಿಕೆಯಾಗಲ್ಲವಾ? ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇವೆ ಎನ್ನುತ್ತಾರೆ. ನಾವು ಬಡವರ ಮುಕ್ತ ರಾಜ್ಯ, ಹಸಿವುಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎನ್ನುತ್ತೇವೆ. ಇವರಿಗೆ ಬಡವರು, ಹಸಿದವರ ಬಗ್ಗೆ, ಅವಕಾಶ ವಂಚಿತರ ಬಗ್ಗೆ ಕಾಳಜಿ ಇದೆಯಾ? ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಇದೆಯಾ?. ನಮಗೆ ಪಾಠ ಹೇಳುವ ಅಧಿಕಾರ ಇದೆಯಾ ಎಂದು ಪ್ರಶ್ನಿಸಿದರು.
'ನೀವು ಜನದ್ವೇಷಿಗಳು': ಬಿಜೆಪಿ ಗದ್ದಲಕ್ಕೆ ಟಕ್ಕರ್ ನೀಡಿದ ಸಿಎಂ, ನೀವು ಯಾರು ಎದ್ದು ನಿಂತರು ಬಗ್ಗಲ್ಲ, ಜಗ್ಗಲ್ಲ. ನಿಮ್ಮ ಹತ್ತರಷ್ಟು ಕೂಗುತ್ತೇನೆ. ನನಗೂ ಕೂಗಲು ಬರುತ್ತದೆ. ಬಿಜೆಪಿಯವರನ್ನು ಕಂಡು ಹೆದರುತ್ತೇನಾ?. ನನ್ನ ಹೋರಾಟವೇ ಬಿಜೆಪಿ, ಆರ್ಎಸ್ಎಸ್ ವಿರುದ್ಧ. ಕಾಂಗ್ರೆಸ್ ಸಂವಿಧಾನ ಕೊಟ್ಟಿದ್ದರಿಂದಲೇ ಬಿಜೆಪಿಯವರು ಇಲ್ಲಿದ್ದಾರೆ. ನೀವು ದೇಶಪ್ರೇಮಿಗಳಲ್ಲ ದ್ವೇಷಪ್ರೇಮಿಗಳು. ನಾವು ಜನವಾದಿಗಳು, ನೀವು ಜನರ ದ್ವೇಷಿಗಳು ಎಂದು ಟೀಕಿಸಿದರು.
ಬಂಧಿಸಿ ಬಂಧಿಸಿ, ಬರೀ ಭಾಷಣ, ಬುರುಡೆ ಭಾಷಣ ಬೇಕಿಲ್ಲ ಎನ್ನುವ ಘೋಷಣೆ ಮೊಳಗಿಸಿದ ಬಿಜೆಪಿ ಸದಸ್ಯರು, ಮೋದಿ ಜಿಂದಾಬಾದ್ ಎನ್ನುವ ಘೋಷಣೆ ಹಾಕಿದರು. ಗದ್ದಲ ಹೆಚ್ಚಾದ ಹಿನ್ನೆಲೆ ಪೀಠದಿಂದ ಎದ್ದುನಿಂತು ಮನವಿ ಮಾಡಿದ ಸಭಾಪತಿ, ಕೇಳಲು ಆಗದಿದ್ದರೆ ಹೊರಗೆ ಹೋಗಿ. ಗೃಹ ಸಚಿವರಿಂದ ಉತ್ತರ ಕೊಡಿಸುವ ಜವಾಬ್ದಾರಿ ನನ್ನದು ಎಂದರು. ಇದನ್ನು ಬೆಂಬಲಿಸಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಬಿಜೆಪಿಯವರನ್ನು ಆಚೆ ಹಾಕಿಸಿ ಸದನ ನಡೆಸಿ ಎಂದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ರವಿಕುಮಾರ್, ನಮ್ಮನ್ನ ಯಾಕೆ ಹೊರಹಾಕಿಸಲಾಗುತ್ತೆ? ಎಂದು ಪ್ರಶ್ನಿಸಿದರು.
ಇಷ್ಟೆಲ್ಲಾ ಗದ್ದಲದ ನಡುವೆಯೂ ಉತ್ತರ ಮುಂದುವರೆಸಿದ ಸಿಎಂ, ಇದನ್ನು ಕೌನ್ಸಿಲ್ ಎಂದುಕೊಂಡಿದ್ದೀರೋ, ಆಟದ ಮೈದಾನವೋ. ಸಂತೆಯಲ್ಲೂ ಹೀಗೆ ಮಾತನಾಡಲ್ಲ ಎಂದರು. ರಾಜ್ಯಕ್ಕೆ ಅನ್ಯಾಯವಾದರೂ ಕೇಂದ್ರವನ್ನು ಕೇಳುವ ಧಮ್ಮು ಇವರಿಗೆ ಇಲ್ಲ. 25 ಸಂಸದರಿದ್ದಾರೆ. ಹಣಕಾಸು ಸಚಿವೆ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಎಂದರೆ ಮತ್ತೊಂದು ಅರ್ಥ ಸುಳ್ಳು. ಕನ್ನಡಿಗರಿಗೆ ಅನ್ಯಾಯವಾದರೂ ಕೇಂದ್ರ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಕನ್ನಡಿಗರಿಗೆ, ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹವಲ್ಲವೇ?. ಬಿಜೆಪಿಯವರು ಕನ್ನಡಿಗರ ದ್ರೋಹಿಗಳು. ತಾಕತ್ತಿದ್ದರೆ ಬನ್ನಿ ಸಾರ್ವಜನಿಕರ ಮುಂದೆ ಹೋಗೋಣ. ನಿಮ್ಮೆಲ್ಲಾ ನಾಯಕರು ಬನ್ನಿ, ಸಾರ್ವಜನಿಕರ ಮುಂದೆ ಚರ್ಚೆ ಮಾಡೋಣ ಎಂದು ಸಿಎಂ ಸವಾಲು ಹಾಕಿದರು.
ಈ ನಡುವೆ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರ ದೇಶದ್ರೋಹಿಗಳ ರಕ್ಷಣೆಗೆ ನಿಂತಿದೆ ಎನ್ನುವ ಆರೋಪಕ್ಕೆ ಪ್ರತಿಯಾಗಿ ಬಿಜೆಪಿಯವರೇ ಭಯೋತ್ಪಾದರು, ದೇಶದ್ರೋಹಿಗಳು, ಬೇರೆ ಯಾರೂ ಇಲ್ಲ, ಬಿಜೆಪಿಯವರೇ ಭಯೋತ್ಪಾದಕರು ಎಂದು ಸಭಾ ನಾಯಕ ಬೋಸರಾಜು ಜೆ ಪಿ ವಿರುದ್ದ ಗಂಭೀರ ಆರೋಪ ಮಾಡಿದರು.
ಪೂರಕ ಅಂದಾಜು ಬಿಲ್ಗೆ ಸದನ ಒಪ್ಪಿಗೆ : ಬಿಜೆಪಿ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ, ಬಿಜೆಪಿಯವರ ಮೊಂಡುತನಕ್ಕೆ ಉತ್ತರ ಕೊಡಲಾಗಲ್ಲ, ಸದಸ್ಯರಿಗೆ ಉತ್ತರ ಮಂಡಿಸುತ್ತೇನೆ ಎಂದು ಬಜೆಟ್ ಲೇಖಾನುದಾನಕ್ಕೆ ಅನುಮತಿ ಕೊಡಿ ಎನ್ನುತ್ತಾ ಸಿಎಂ ಉತ್ತರ ಮುಗಿಸಿದರು. ನಂತರ ಧನವಿನಿಯೋಗ ವಿಧೇಯಕ ಮಂಡಿಸಿದರು. ಪೂರಕ ಅಂದಾಜು ಬಿಲ್ಗಳ ಪಾಸ್ ಮಾಡುವಂತೆ ಸಿಎಂ ಮನವಿ ಮಾಡಿದರು. ಗದ್ದಲದ ನಡುವೆ ಪೂರಕ ಅಂದಾಜುಗಳಿಗೆ ಸದನ ಒಪ್ಪಿಗೆ ನೀಡಿತು.
ಇದನ್ನೂ ಓದಿ : ಹಿಂದಿನ ಸರ್ಕಾರದ್ದು ಬರೀ ಲೂಟಿ, ನಮ್ಮದು ರಾಜ್ಯದ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯ