ಹಾವೇರಿ: ಶಿಗ್ಗಾಂವ್ ಸವಣೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಿದ್ಧವಾಗಿದೆ. ಬಸವರಾಜ್ ಬೊಮ್ಮಾಯಿ ಸಂಸದರಾಗಿ ಲೋಕಸಭೆಗೆ ಆಯ್ಕೆಯಾದ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕ್ಷೇತ್ರ ಉಪಚುನಾವಣೆಗೆ ಸಜ್ಜಾಗಿದೆ.
ಚುನಾವಣಾ ಆಯೋಗ ಚುನಾವಣೆಗೆ ಅಧಿಸೂಚನೆ ಹೊರಡಿಸಿಲ್ಲ. ಇದಕ್ಕೂ ಮುನ್ನವೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಪೈಪೋಟಿ ಏರ್ಪಟ್ಟಿದೆ. ಹಲವು ನಾಯಕರು ಕ್ಷೇತ್ರದತ್ತ ಮುಖ ಮಾಡಿದ್ದಾರೆ.
ಮಾಜಿ ಸಚಿವ ಆರ್.ಶಂಕರ್, ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ.ಫೈಜ್ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ. ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಸವಣೂರು ತಾಲೂಕಿನ ಅಲ್ಲೀಪುರ್ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಜನರೊಂದಿಗೆ ಮಾತನಾಡುತ್ತಿರುವ ಫೈಜ್, "ಕ್ಷೇತ್ರದ ಜನರು ಯುವ ನಾಯಕನನ್ನು ಬಯಸುತ್ತಿದ್ದಾರೆ. ಇಲ್ಲಿಯ ಜನರ ಮುಖ ನೋಡಿದರೆ ಅದು ಗೊತ್ತಾಗುತ್ತೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದೆ. ಜನರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ತಲುಪಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಇನ್ನು ನಾಲ್ಕು ವರ್ಷ ಕಾಂಗ್ರೆಸ್ ಶಾಸಕ ಈ ಕ್ಷೇತ್ರದ ಜನರಿಗೆ ಬೇಕಾಗಿದೆ. ನಾನು ಕಾಂಗ್ರೆಸ್ ಸರ್ಕಾರದ ನಿಷ್ಠಾವಂತ ಕಾರ್ಯಕರ್ತನಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ" ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ, "ಸವಣೂರು ಶಿಗ್ಗಾಂವ್ ಕ್ಷೇತ್ರಕ್ಕೂ ನನಗೂ 6 ವರ್ಷಗಳ ಸಂಬಂಧವಿದೆ. ನಮ್ಮ ತಂದೆ ಈ ಕ್ಷೇತ್ರದಲ್ಲಿ 1978ರಲ್ಲಿ ಸ್ಪರ್ಧಿಸಿದ್ದರು. ಸಾಕಷ್ಟು ಸಂಬಂಧಿಕರು ಕ್ಷೇತ್ರದಲ್ಲಿದ್ದಾರೆ. ಹೀಗಾಗಿ ಕ್ಷೇತ್ರದ ಜೊತೆ ನನಗೆ ನಂಟಿದೆ. ಈಗ ಚುನಾವಣೆ ಬಂದಿದೆ. ಪಕ್ಷ ಸಂಘಟನೆ ಮಾಡುತ್ತಿದ್ದೇನೆ" ಎಂದರು.
ಈ ಚುನಾವಣೆಯಲ್ಲಿ ಸ್ಥಳೀಯ ಮತ್ತು ಹೊರಗಿನ ಅಭ್ಯರ್ಥಿ ಎಂಬ ತಿಕ್ಕಾಟದ ಬಗ್ಗೆ ಮಾತನಾಡುತ್ತಾ, "ನಾನು ಆರು ವರ್ಷದಿಂದ ಇಲ್ಲಿದ್ದೇನೆ. ಕ್ಷೇತ್ರದ ಇತಿಹಾಸ ನೋಡಿದರೆ ಯಾರು ಸ್ಥಳೀಯರು ಯಾರು ಹೊರಗಿನವರು ಎನ್ನುವುದು ಗೊತ್ತಾಗುತ್ತೆ. ಒಂದು ರೀತಿಯಲ್ಲಿ ನೋಡಿದರೆ ಇಲ್ಲಿಗೆ ಸ್ಥಳೀಯರು ಅಂತಾ ಯಾರೂ ಕಾಣಿಸುವುದಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯರು ಯಾರಿದ್ದಾರೆ. ದೇಶದ ರಾಜಧಾನಿ ದೆಹಲಿಯಲ್ಲಿ ಸ್ಥಳೀಯರು ಯಾರಿದ್ದಾರೆ" ಎಂದು ಪ್ರಶ್ನಿಸಿದರು.
"ಸ್ಥಳೀಯರು ಯಾರು, ಹೊರಗಿನವರು ಯಾರು ಎಂದು ತೀರ್ಮಾನ ಮಾಡುವವರು ಮತದಾರರು. ನನಗೆ ಟಿಕೆಟ್ ಸಿಗಲು ಪ್ರಯತ್ನಿಸುತ್ತೇನೆ. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೋ ಅವರನ್ನು ಗೆಲ್ಲಿಸಲು ಕ್ಷೇತ್ರದಲ್ಲಿ ಪ್ರಯತ್ನಿಸುತ್ತೇನೆ. ನನಗೆ ಟಿಕೆಟ್ ಸಿಗಬಹುದು, ಸಿಗದಿರಬಹುದು. ಆದರೆ ಜನರನ್ನು ಸಂಪರ್ಕಿಸಲು ಒಂದು ಅವಕಾಶ ಸಿಕ್ಕಿದೆ, ಭೇಟಿಯಾಗುತ್ತಿದ್ದೇನೆ" ಎಂದು ಫೈಜ್ ತಿಳಿಸಿದರು.
ಇದನ್ನೂ ಓದಿ: 'ಸರ್ಕಾರಕ್ಕಿಂತ ಪಕ್ಷ ದೊಡ್ಡದು': ಯುಪಿ ಬಿಜೆಪಿಯಲ್ಲಿ ಭುಗಿಲೆದ್ದ ಬೇಗುದಿ, ಮೋದಿಗೆ ದೂರು - UP BJP Rift