ಬೆಂಗಳೂರು/ದೆಹಲಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಈ ವೇಳೆ ಕರ್ನಾಟಕ ಸರ್ಕಾರವನ್ನು ಹಗರಣದ ಆರೋಪಗಳ ಮೂಲಕ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೈಕಮಾಂಡ್ಗೆ ವಿವರಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಹಾಗೂ ಮೂಡಾ ವಿಚಾರವಾಗಿ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಸುಳ್ಳು ಆರೋಪ ಮಾಡಲಾಗುತ್ತಿದೆ. ಇದರಲ್ಲಿ ಸರ್ಕಾರದ ಪಾತ್ರ ಇಲ್ಲ. ಇದು ಬಿಜೆಪಿಯ ಸೇಡಿನ ರಾಜಕಾರಣ ಎಂದು ಉಭಯ ನಾಯಕರು ಹೈಕಮಾಂಡ್ಗೆ ತಿಳಿಸಿದ್ದಾರೆ.
ಮುಡಾ ನಿವೇಶನ ಕಾನೂನುಬದ್ಧ: ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. 50:50 ಅನುಪಾತದ ಹಂಚಿಕೆ ನನ್ನ ಕುಟುಂಬಕ್ಕೆ ವಿಶೇಷವಾಗಿ ಮಾಡಿಲ್ಲ. ಮುಡಾ ನಿಯಮದಂತೆ ಮಾಡಲಾಗಿದೆ. ನಾನು ಅಧಿಕಾರದಲ್ಲಿದ್ದಾಗ ಈ ಬದಲಿ ಸೈಟುಗಳು ಹಂಚಿಕೆ ಆಗಿಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಸೈಟ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
We met the leaders of @INCKarnataka and had a detailed review on how to further strengthen the policies of the Congress Govt in the state to ensure social justice, economic empowerment and unbridled progress for the people.
— Mallikarjun Kharge (@kharge) July 30, 2024
The ideals and ideas of Basavanna and Babasaheb Dr… pic.twitter.com/T6J6Nu7KDx
ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದ ಬಗ್ಗೆ ಮಾಹಿತಿ: ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಬಗ್ಗೆ ರಾಷ್ಟ್ರೀಯ ನಾಯಕರಿಗೆ ವರದಿ ನೀಡಿದರು. ಅಕ್ರಮ ಅಧಿಕಾರಿಗಳಿಂದ ಆಗಿದೆ. ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ. ಹಲವರನ್ನು ಬಂಧಿಸಲಾಗಿದೆ. ವರ್ಗಾವಣೆಯಾಗಿದ್ದ ಹಣ ವಶಪಡಿಸಿಕೊಳ್ಳುತ್ತಿದ್ದೇವೆ. ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇ.ಡಿ.) ಬಳಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎಂದು ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ.
ಸಿಎಂ ಹೆಸರು ಹೇಳುವಂತೆ ಅಧಿಕಾರಿಗಳಿಗೆ ಇ.ಡಿ. ಒತ್ತಡ ಹೇರುತ್ತಿದೆ. ಇ.ಡಿ. ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಬೆದರಿಕೆ ಹಾಕಲಾಗುತ್ತಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಆರೋಪಿತ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇ.ಡಿ.ಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದೆವು. ಬಿಜೆಪಿ ಸೇಡಿನ ಹಾಗು ಅಸೂಯೆಯ ರಾಜಕಾರಣ ಮಾಡುತ್ತಿರುವ ಬಗ್ಗೆ ಚರ್ಚಿಸಿದ್ದೇವೆ. ಬಿಜೆಪಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದಲ್ಲಿ ನನ್ನನ್ನು ಟಾರ್ಗೆಟ್ ಮಾಡುವುದಕ್ಕೆ ಮುಂದಾಗಿದ್ದಾರೆ ಎಂಬುದನ್ನು ಹೈಕಮಾಂಡ್ ನಾಯಕರಿಗೆ ತಿಳಿಸಿದ್ದೇವೆ" ಎಂದರು.
"ಮೂಡಾ ಹಗರಣದಲ್ಲಿ ಯಾವುದೇ ಅಕ್ರಮ ಆಗಿಲ್ಲ. ಎಲ್ಲವೂ ಸರಿಯಾಗಿದೆ. ಕಾನೂನು ಬಾಹಿರ ನಿವೇಶನ ಹಂಚಿಕೆಯಾಗಿಲ್ಲ ಎಂಬುದನ್ನು ಅವರ ಗಮನಕ್ಕೆ ತರಲಾಗಿದೆ. ಈ ಹಗರಣಗಳಲ್ಲಿ ಸರ್ಕಾರದ ಅಥವಾ ಹಣಕಾಸು ಸಚಿವಾಲಯದ ಪಾತ್ರ ಇಲ್ಲ. ಇದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಸರ್ಕಾರದ ರಕ್ಷಣೆಗೆ ಬರಬೇಕು ಎಂದು ಕೋರಿದ್ದೇವೆ" ಎಂದು ತಿಳಿಸಿದರು.
"ಬಜೆಟ್ ಬಗ್ಗೆಯೂ ಚರ್ಚೆ ಆಗಿದೆ. ಕರ್ನಾಟಕಕ್ಕೆ ಏನೇನೂ ಉಪಯೋಗ ಆಗಿಲ್ಲ. ಇದನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿದ್ದಾರೆ. ಆದರೆ, ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿರುವುದನ್ನು ಚರ್ಚಿಸಿದ್ದೇವೆ" ಎಂದರು.
ಇದೇ ವೇಳೆ, "ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಏನು ಮಾಡಬೇಕು ಎಂಬುದನ್ನು ರಾಜ್ಯ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತೀರ್ಮಾನಿಸುತ್ತೇವೆ" ಎಂದು ತಿಳಿಸಿದರು.
ಸಂಪುಟ ಪುನರ್‌ರಚನೆ ಬಗ್ಗೆ ಚರ್ಚೆ?: ಹೈಕಮಾಂಡ್ ಭೇಟಿ ವೇಳೆ ಸಂಪುಟ ಪುನರ್‌ರಚನೆ ಬಗ್ಗೆಯೂ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಬಳಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಹಿನ್ನಡೆಗೆ ಮಧುಸೂಧನ್ ಮಿಸ್ತ್ರಿ ಸಮಿತಿಯ ಸತ್ಯಶೋಧನಾ ವರದಿ ಮುಂದಿಟ್ಟು ಹೈಕಮಾಂಡ್ ಚರ್ಚೆ ನಡೆಸಿದೆ. ಈ ವರದಿಯ ಆಧಾರದಲ್ಲಿ ಕೆಲವು ಸಲಹೆ ಸೂಚನೆಗಳೊಂದಿಗೆ ಸಂಪುಟ ಪುನರ್‌ರಚಿಸುವ ಬಗ್ಗೆ ಸೂಚನೆ ನೀಡಿದೆ ಎನ್ನಲಾಗಿದೆ.
ಮಿಸ್ತ್ರಿ ರಾಜ್ಯದ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದು, ಸಚಿವರ ಕಾರ್ಯವೈಖರಿ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಹೀಗಾಗಿ ಕೆಲ ಸಚಿವರನ್ನು ಕೈಬಿಟ್ಟು ಸಂಪುಟ ಪುನರ್‌ರಚನೆಗೆ ಚರ್ಚಿಸಿದೆ. ಕೆಲ ಸಚಿವರು ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ. ಪಕ್ಷದ ಅಭ್ಯರ್ಥಿ ವಿರುದ್ಧವೇ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೊಕ್ ನೀಡಬೇಕು. ಹೊಸಬರಿಗೆ ಆದ್ಯತೆ ನೀಡಬೇಕು ಎಂಬ ಕೂಗು ಹೆಚ್ಚಾಗಿದೆ ಎಂದು ಮಧುಸೂಧನ್ ಮಿಸ್ತ್ರಿ ವರದಿಯಲ್ಲಿನ ಕೆಲವು ಅಂಶಗಳನ್ನು ಉಲ್ಲೇಖ ಮಾಡಲಾಗಿದ್ದು, ಇದನ್ನೇ ಮುಂದಿಟ್ಟು ಸಂಪುಟಕ್ಕೆ ಸರ್ಜರಿ ಮಾಡುವ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.