ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಹೈಕಮಾಂಡ್ ಜೊತೆ ಚರ್ಚಿಸಲು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಮೇ 28 ಹಾಗೂ ಮೇ 29ರಂದು ಇಬ್ಬರೂ ದೆಹಲಿಯಲ್ಲಿ ಮೊಕ್ಕಾಂ ಹೂಡಲಿದ್ದಾರೆ.
ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್‌ಗೆ ಪರಿಷತ್ನಲ್ಲಿ 7 ಸ್ಥಾನ ಲಭಿಸಲಿದೆ. ಆದರೆ ಈ ಏಳು ಸ್ಥಾನಕ್ಕಾಗಿ 60ಕ್ಕೂ ಅಧಿಕ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸುತ್ತಿದ್ದಾರೆ. ಒಂದೆಡೆ ಮಂತ್ರಿಗಳ ಮೂಲಕ ಲಾಬಿ ನಡೆಸುತ್ತಿದ್ದರೆ, ಇನ್ನೊಂದೆಡೆ ಡಿಸಿಎಂ, ಸಿಎಂ ಮೂಲಕವೂ ಒತ್ತಡ ಹೇರುತ್ತಿದ್ದಾರೆ. ಸಮುದಾಯವಾರು, ಜಾತಿವಾರು, ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಸಿಎಂ ಹಾಗೂ ಡಿಸಿಎಂ ಬಳಿ ಒತ್ತಡ ಹೇರಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಸಚಿವರ ನಿಯೋಗ, ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರ ನಿಯೋಗ ಈಗಾಗಲೇ ಡಿಸಿಎಂರನ್ನು ಭೇಟಿಯಾಗಿ ತಮ್ಮ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇತ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ನಾಯಕರು, ಮೂಲ ಕಾಂಗ್ರೆಸಿಗರು ಎಂಎಲ್‌ಸಿ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಒತ್ತಾಯವೂ ಇದೆ.
ಹೀಗಾಗಿ ಕಾಂಗ್ರೆಸ್‌ಗೆ ಲಭಿಸಲಿರುವ ಏಳು ಎಂಎಲ್‌ಸಿ ಸ್ಥಾನಗಳಿಗೆ ಕೈ ಪಾಳಯದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಕಾಂಕ್ಷಿಗಳ ಪಟ್ಟಿ ಸಿಎಂ ಹಾಗೂ ಡಿಸಿಎಂ ಮುಂದಿದ್ದು, ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ಗೆ ಬಿಡಲಾಗಿದೆ.
ಇದನ್ನೂ ಓದಿ: ಕೈ ತಪ್ಪಿದ ಎಂಎಲ್‌ಸಿ ಟಿಕೆಟ್: ಮಂಡ್ಯ ಸಭೆ ನಂತರ ಮುಂದಿನ ನಿರ್ಧಾರ ಎಂದ ಶ್ರೀಕಂಠೇಗೌಡ - k t SrikantheGowda