ಬೆಂಗಳೂರು: ವಾಕ್ಮೀಕಿ ನಿಗಮ ಹಗರಣ ಆರೋಪ ಪ್ರಕರಣದ ತನಿಖೆ ವೇಳೆ ಇಡಿ ಅಧಿಕಾರಿಗಳು ಇಲಾಖೆಯ ನಿವೃತ್ತ ಅಧಿಕಾರಿಗೆ ಒತ್ತಡ ಹೇರಿದ ವಿಚಾರ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿತು. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತು.
ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಈ ಹಿನ್ನೆಲೆ ಸಭಾಪತಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದರು.
ಶೂನ್ಯವೇಳೆ ಮುಗಿದ ನಂತರ ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ನಿವೃತ್ತಿ ಅಧಿಕಾರಿಯು ಇಡಿ ಒತ್ತಡ ಹೇರುತ್ತಿರುವ ಆರೋಪ ಮಾಡಿ ಪೊಲೀಸ್ ದೂರು ನೀಡಿರುವ ವಿಷಯದಡಿ ನಿಲುವಳಿ ಸೂಚನೆಗೆ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಮುಂದಾದರು. ಇದಕ್ಕೆ ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಇದು ಕೋರ್ಟ್ನಲ್ಲಿದೆ, ಯಾವ ನಿಯಮದಲ್ಲಿಯೂ ಚರ್ಚೆಗೆ ಅವಕಾಶ ನೀಡಲು ಬರಲ್ಲ. ಸಾರ್ವಜನಿಕ ಹಿತಾಸಕ್ತಿ ವಿಷಯದಡಿಯೂ ಬರಲ್ಲ. ಬೇರೆ ರೂಪದಲ್ಲಿ ಕೊಡಿ, ಪರಿಗಣಿಸಲಾಗುತ್ತದೆ. ಇಡಿಗೂ, ಸರ್ಕಾರಕ್ಕೂ ಏನು ಸಂಬಂಧ? ಸಿಬಿಐ, ಇಡಿ ಎಲ್ಲ ಇದರಲ್ಲಿದೆ. ಹಾಗಾಗಿ ಚರ್ಚೆಗೆ ಅವಕಾಶವಿಲ್ಲ ಎಂದರು.
ಇದನ್ನು ವಿರೋಧಿಸಿದ ವೆಂಕಟೇಶ್, ಅಧಿಕಾರಿಯಾಗಿದ್ದವರೊಬ್ಬರು ದೂರು ನೀಡಿದ್ದಾರೆ. ಹಾಗಾಗಿ ನಿಲುವಳಿ ಸೂಚನೆಯಡಿ ವಿಷಯ ಪ್ರಾಸ್ತಾಪಕ್ಕೆ ಅವಕಾಶ ನೀಡಿ, ಚರ್ಚೆಗೆ ಯಾವಾಗಲಾದರೂ ಅವಕಾಶ ನೀಡಿ ಎಂದು ಮನವಿ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಯಾರು ಯಾರ ಮೇಲೆ ಬೇಕಾದರೂ ದೂರು ಕೊಡಬಹುದು, ಸತ್ಯ ಹೊರಬರಬೇಕಲ್ಲ, ಇಡಿ ತನಿಖೆ ಮಾಡಲಿ, ಈ ಕುರಿತ ಚರ್ಚೆಗೆ ಅವಕಾಶ ನೀಡಬಾರದು ಎಂದು ಪಟ್ಟುಹಿಡಿದರು.
ಈ ವೇಳೆ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದನ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಹತ್ತು ನಿಮಿಷ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಿಕೆ ನಂತರವೂ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಇಡಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ - Valmiki Corporation Scam