ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಬುಧವಾರ ಸಹ ಮುಂದುವರೆಸಿದ್ದಾರೆ. ಇಂದು ಬೆಳಗ್ಗೆಯೇ ಮೃತ ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ. ನಿನ್ನೆ ಸಂಜೆಯೇ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿಐಡಿ ತಂಡ, ನಿನ್ನೆಯೇ ಅವರ ಮನೆಯ ಪರಿಶೀಲನೆಯ ವೇಳೆ ನಿಗಮಕ್ಕೆ ಸಂಬಂಧಿಸಿದ ಒಂದು ಪೆನ್ ಡ್ರೈವ್ ಅನ್ನು ತೆಗೆದುಕೊಂಡು ಹೋಗಿದ್ದರು.

ಇಂದು ಚಂದ್ರಶೇಖರನ್ ಅವರು ಬಳಸುತ್ತಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖೆಯ ಭಾಗವಾಗಿ ಇದೆನ್ನೆಲ್ಲಾ ಸಿಐಡಿ ತಂಡ ತೆಗೆದುಕೊಂಡು ಹೋಗುತ್ತಿದ್ದಾರೆ. ನಾಳೆಯು ಸಹ ಸಿಐಡಿ ತಂಡ ಇವರ ಮನೆಗೆ ಭೇಟಿ ನೀಡಿ ಪರಿಶೀಲನೆ ಮುಂದುವರೆಸುವ ಸಾಧ್ಯತೆ ಇದೆ.

ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ: ಅಧಿಕ್ಷಕ ಚಂದ್ರಶೇಖರನ್ ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು. ಅವರು ಡೆತ್ ನೋಟ್ನಲ್ಲಿ ಬರೆದಿಟ್ಟಿರುವಂತೆ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ನಗರದ ಶಿವಪ್ಪನಾಯಕ ವೃತ್ತದಲ್ಲಿ ಇಂದು ಸಹ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಹಾಕಲಾಯಿತು. ಹಿಂದೆ ಈಶ್ವರಪ್ಪನವರ ಮೇಲೆ ಆರೋಪ ಬಂದ ತಕ್ಷಣ ಅವರು ರಾಜೀನಾಮೆ ನೀಡಿದ್ದರು. ಈಗ ಅದೇ ರೀತಿ ಆರೋಪ ಹೂತ್ತಿರುವ ಸಚಿವರು ರಾಜೀನಾಮೆ ನೀಡಬೇಕು. ಅಲ್ಲದೇ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಬಿಜೆಪಿ ಪ್ರಮುಖರು ಹಾಜರಿದ್ದರು.
ಇದನ್ನೂ ಓದಿ: ಚಂದ್ರಶೇಖರನ್ ಸಾವಿಗೆ ನ್ಯಾಯ ಒದಗಿಸಬೇಕಿದೆ: ಮಧು ಬಂಗಾರಪ್ಪ - Madhu Bangarappa Condoles