ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ದಾವಣಗೆರೆಯಲ್ಲಿ ರೈಲಿನಿಂದ ಬಿದ್ದು ಗಾಯಗೊಂಡಿದ್ದ ಆರೋಪಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆ ಇಂದು ಗಿರೀಶ್ನನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ.
ಡಿಶ್ಚಾರ್ಜ್ ಪ್ರಕ್ರಿಯೆ ಮುಗಿಯುತ್ತಿದಂತೆ ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ ತಂಡ ವಶಕ್ಕೆ ಪಡೆದುಕೊಂಡಿದೆ. ಸಿಐಡಿ ಅಧಿಕಾರಿಗಳು ಆರೋಪಿಯನ್ನು ಕೋರ್ಟ್ಗೆ ಹಾಜರು ಪಡಿಸುವ ಮುನ್ನ ಬೆಂಡಿಗೇರಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಗಾಯಗೊಂಡಿದ್ದ ಆರೋಪಿಯನ್ನು ನೇರವಾಗಿ ಕಿಮ್ಸ್ಗೆ ದಾಖಲಿಸಿದ್ದರಿಂದ ಬಂಧನದ ಪ್ರಕ್ರಿಯೆ ಮುಗಿದಿರಲಿಲ್ಲ. ಹಾಗಾಗಿ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಬೆಂಡಿಗೇರಿ ಠಾಣೆಗೆ ಕರೆತಂದು ನಂತರ ಕೋರ್ಟ್ ಹಾಜರುಪಡಿಸಲಿದ್ದಾರೆ.
ಇದರ ನಡುವೇ ಪೊಲೀಸ್ ಠಾಣೆಗೆ ಆರೋಪಿ ಗಿರೀಶ್ ತಾಯಿ ಸವಿತಾ ಅವರನ್ನು ಕರೆಸಿ ಮಾಹಿತಿ ಪಡೆದುಕೊಂಡರು. ಆರೋಪಿ ಗಿರೀಶ್ನನ್ನು ಇಂದು ಸಂಜೆಯೊಳಗೆ ಕೋರ್ಟ್ಗೆ ಹಾಜರುಪಡಿಸಿ ಸಿಐಡಿ ತಂಡ ಸ್ಥಳ ಮಹಜರು ಮಾಡುವ ಸಾಧ್ಯತೆ ಇದೆ. ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆಯನ್ನು ಇದೇ ತಂಡ ನಡೆಸುತ್ತಿದೆ.
ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ವಿಶ್ವನಾಥ ಅಲಿಯಾಸ್ ಗಿರೀಶ್ ಎಂಬಾತ ಮೇ.15ರಂದು ಅಂಜಲಿ ಅಂಬಿಗೇರ ಎಂಬ ಯುವತಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ.
ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ: ಹುಬ್ಬಳ್ಳಿಯಲ್ಲಿ ಬೀಡುಬಿಟ್ಟ ಸಿಐಡಿ, ತನಿಖೆ ಚುರುಕು - Anjali Murder Probe