ಬೆಳಗಾವಿ: ಚನ್ನಮ್ಮನ ಕಿತ್ತೂರು ಉತ್ಸವ ಕೇವಲ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಜಲಸಾಹಸ ಕ್ರೀಡೆಗಳನ್ನೂ ಆಯೋಜಿಸಲಾಗಿದ್ದು ಪುಟ್ಟ ಮಕ್ಕಳು, ಯುವಕರು ಕೆರೆಯಲ್ಲಿ ಸಾಹಸ ಪ್ರದರ್ಶಿಸಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ತುಂಬುಗೆರೆಯಲ್ಲಿ ಉತ್ಸವ ನಿಮಿತ್ತ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಜಲಸಾಹಸ ಕ್ರೀಡೆಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿವರ್ ರ‍್ಯಾಪ್ಟಿಂಗ್, ಕಯಾಕಿಂಗ್, ಮೋಟರ್ ಬೋಟ್, ಜೆಟ್ಸ್ ಕೀ, ಬನಾನ ರೈಡ್ ಪ್ರಕಾರದ ಸಾಹಸ ಕ್ರೀಡೆಗಳಲ್ಲಿ ಮಕ್ಕಳು, ಯುವಕ, ಯುವತಿಯರು ಸೇರಿದಂತೆ ಕುಟುಂಬಸಮೇತರಾಗಿ ಪಾಲ್ಗೊಳ್ಳುತ್ತಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಹಯೋಗದಲ್ಲಿ ಈ ಜಲ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಚಿಕ್ಕ ಮಕ್ಕಳು ಏಕಾಂಗಿಯಾಗಿ ಬೋಟ್ ರೈಡ್ ಮಾಡುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ.
ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಬಿ.ಶ್ರೀನಿವಾಸ ಮಾತನಾಡಿ, ''ಪ್ರತಿವರ್ಷದಂತೆ ಈ ಬಾರಿಯೂ ಜಲಸಾಹಸ ಕ್ರೀಡೆ ಹಮ್ಮಿಕೊಂಡಿದ್ದು, ಐದಾರು ಪ್ರಕಾರದ ಸಾಹಸ ಕ್ರೀಡೆಗಳಲ್ಲಿ ಯುವಕರು ಭಾಗವಹಿಸುತ್ತಿದ್ದಾರೆ. ಪ್ರಮುಖವಾಗಿ ಯುವಕರು ಮತ್ತು ಮಕ್ಕಳಲ್ಲಿ ನೀರಿನ ಭಯ ಹೋಗಲಾಡಿಸುವ ಉದ್ದೇಶ ಹೊಂದಿದ್ದೇವೆ. ವಿಶೇಷ ಸಂದರ್ಭದಲ್ಲಿ ನೀರಿನ ಅವಘಡ ಸಂಭವಿಸಿದಾಗ ಯಾವ ರೀತಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತಿದ್ದೇವೆ'' ಎಂದು ಹೇಳಿದರು.
ಪ್ರತಿನಿತ್ಯ 400 ಜನರಿಂದ ಕೆರೆಯಲ್ಲಿ ಸಾಹಸ ಪ್ರದರ್ಶನ: ''ನೀರಿನಲ್ಲಿ ಆಡುವುದು ಎಂದರೆ ಏನೋ ಒಂಥರಾ ಮಜಾ ಬರುತ್ತದೆ. ಜಲಸಾಹಸ ಕ್ರೀಡೆಗಳಿಗೆ ಈ ಭಾಗದ ಜನರು ದೂರದ ದಾಂಡೇಲಿ, ಗೋವಾ ಸೇರಿ ಮತ್ತಿತರ ಕಡೆ ಹೋಗಬೇಕಾಗುತ್ತದೆ. ಹಾಗಾಗಿ, ಕಿತ್ತೂರು ಉತ್ಸವದ ಅಂಗವಾಗಿ ಮೂರು ದಿನ ಜನರಿಗೆ ಬೋಟಿಂಗ್ ಮಾಡಲು ಅವಕಾಶ ಕಲ್ಪಿಸಿದ್ದೇವೆ. ಮಧ್ಯಾಹ್ನದ ನಂತರ ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆರೆ ನೋಡಲು ತುಂಬಾ ಜನ ಬರುತ್ತಿದ್ದಾರೆ. ಆದರೆ, ಪ್ರತಿನಿತ್ಯ 400 ಜನರು ಕೆರೆಯಲ್ಲಿ ಸಾಹಸ ಪ್ರದರ್ಶಿಸುತ್ತಿದ್ದಾರೆ. ಇಲ್ಲಿ ನಿರಂತರವಾಗಿ ಬೋಟಿಂಗ್ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ'' ಎಂದು ಹೇಳಿದರು.
ತುಂಬುಗೆರೆಯಲ್ಲಿ ಬೋಟಿಂಗ್ ಮಾಡುತ್ತಿದ್ದ ಗಿರಿಯಾಲ ಗ್ರಾಮದ ಬಾಲಕ ಕೃಷ್ಣ ಮಾತನಾಡಿ, ''ನನಗೆ ಯಾವುದೇ ಭಯ ಆಗುತ್ತಿಲ್ಲ. ಸುಮಾರು ಅರ್ಧ ಗಂಟೆ ಒಬ್ಬನೇ ಸಾಹಸ ಪ್ರದರ್ಶಿಸಿದ್ದು ತುಂಬಾ ಖುಷಿ ಆಗುತ್ತಿದೆ. ಎಲ್ಲರಿಗೂ ಹ್ಯಾಪಿ ಕಿತ್ತೂರು ಉತ್ಸವ'' ಎಂದು ಹೇಳಿದ್ದಾರೆ.
ಕಿತ್ತೂರು ಉತ್ಸವ ಜಬರ್ದಸ್ತ್ ಆಗಿದೆ: ಇನ್ನೊಬ್ಬ ಬಾಲಕ ವಿನಯ್ ಮಾತನಾಡಿ, ''ಇದೇ ಮೊದಲ ಬಾರಿ ಬೋಟಿಂಗ್ ಮಾಡುತ್ತಿದ್ದು, ನನ್ನ ಜೊತೆಗೆ ಸಹೋದರ ಕೂಡ ಬಂದಿದ್ದಾನೆ. ಮಸ್ತ್ ಮಜಾ ಮಾಡುತ್ತಿದ್ದೇವೆ. ಈ ವರ್ಷದ ಕಿತ್ತೂರು ಉತ್ಸವ ಜಬರ್ದಸ್ತ್ ಆಗಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಿತ್ತೂರು ಉತ್ಸವ: ಜಲಸಾಹಸ ಕ್ರೀಡೆಯಲ್ಲಿ ಮಿಂದೆದ್ದ ಕುಂದಾನಗರಿ ಮಂದಿ- ವಿಡಿಯೋ