ಕೊಪ್ಪಳ: ಕೊಪ್ಪಳ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಎಂಸಿಹೆಚ್ ಆಸ್ಪತ್ರೆಯಿಂದ 22 ದಿನದ ಹೆಣ್ಣು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್‌ನಲ್ಲಿ ಬುಧವಾರ ರವಾನಿಸಲಾಯಿತು. ಪೋಷಕರು ಸ್ಥಳೀಯ ಆಂಬ್ಯುಲೆನ್ಸ್‌ನವರ ಸಹಕಾರದಲ್ಲಿ ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಆಂಬ್ಯುಲೆನ್ಸ್ ಚಾಲಕರ ಸಮಯಪ್ರಜ್ಞೆ ಹಾಗೂ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ಫಕೀರಸ್ವಾಮಿ ಹಾಗೂ ಹುಲಿಗೆಮ್ಮ ದಂಪತಿಯ 22 ದಿನದ ಮಗುವನ್ನು ಚಿಕಿತ್ಸೆಗಾಗಿ 4 ದಿನಗಳ ಹಿಂದೆಯಷ್ಟೇ ಕೊಪ್ಪಳದ ಎಂಸಿಹೆಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಶುವನ್ನು ತಪಾಸಣೆ ಮಾಡಿದ ವೈದ್ಯರು ಮಗುವಿನ ಹೃದಯದಲ್ಲಿ ಸಮಸ್ಯೆ ಇರುವ ಬಗ್ಗೆ ಪೋಷಕರಿಗೆ ತಿಳಿಸಿದ್ದರು. ಆದಷ್ಟು ಬೇಗನೇ ಮಗುವಿಗೆ ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸಬೇಕು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಬುಧವಾರ ಮಗುವಿನ ಪೋಷಕರು ಸ್ಥಳೀಯ ಆಂಬ್ಯುಲೆನ್ಸ್‌ನವರ ಸಹಕಾರದೊಂದಿಗೆ ಝೀರೋ ಟ್ರಾಫಿಕ್‌ನಲ್ಲಿ ಮಗುವನ್ನು ಬೆಂಗಳೂರಿಗೆ ಕರೆದೊಯ್ದರು.
ಆಂಬ್ಯುಲೆನ್ಸ್ ಚಾಲಕರ ಕಾರ್ಯಕ್ಕೆ ಶ್ಲಾಘನೆ: ಹಸುಗೂಸಿಗೆ ಇರುವ ಆರೋಗ್ಯ ಸಮಸ್ಯೆಯನ್ನು ಅರಿತ ಸ್ಥಳೀಯ ಆಂಬ್ಯುಲೆನ್ಸ್ ಚಾಲಕರು, ಮಾಲೀಕರು ರಾಜ್ಯಾದ್ಯಂತ ಇರುವ ತಮ್ಮ ಸಂಘದ ಸದಸ್ಯರೊಂದಿಗೆ ಮಾತನಾಡಿಕೊಂಡು ಮಗುವನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ರವಾನಿಸಲು ನಿರ್ಧರಿಸಿದರು. ಅದರಂತೆ ಸರಿಯಾಗಿ ಬುಧವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಕೊಪ್ಪಳ ಜಿಲ್ಲಾಸ್ಪತ್ರೆಯ ಆವರಣದಿಂದ ಬೆಂಗಳೂರಿಗೆ ಆಂಬ್ಯುಲೆನ್ಸ್‌ಗಳು ತೆರಳಿವೆ. ಕೊಪ್ಪಳ, ಹೊಸಪೇಟೆ, ಕೂಡ್ಲಗಿ, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಮಗುವನ್ನು ರವಾನಿಸಲಾಯಿತು.
ಇದನ್ನೂ ಓದಿ: ಬೆಂಗಳೂರು: ಗ್ರೀನ್ ಕಾರಿಡಾರ್‌ನಲ್ಲಿ ಬ್ರೈನ್ ಡೆಡ್ ವ್ಯಕ್ತಿಯ ಹೃದಯ, ಶ್ವಾಸಕೋಶ ರವಾನೆ