ಬೆಂಗಳೂರು: ತಂದೆ-ತಾಯಿಗೂ ತಿಳಿಸದೆ, 14 ವರ್ಷದ ಬಾಲಕಿಯನ್ನು ಯುವಕನೊಂದಿಗೆ ವಿವಾಹ ಮಾಡಿಸಿದ ಘಟನೆ ಇಲ್ಲಿನ ಸರ್ಜಾಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಅಪ್ರಾಪ್ತ ಮಗಳನ್ನು ಪುಸಲಾಯಿಸಿ ಯುವಕನೊಬ್ಬನ ಜೊತೆ ಮದುವೆ ಮಾಡಿಸಲಾಗಿದೆ ಎಂದು ಬಾಲಕಿಯ ತಾಯಿಯೇ ದೂರು ನೀಡಿದ್ದಾರೆ. ಈ ಸಂಬಂಧ ಮದುವೆ ಮಾಡಿಕೊಂಡ ಯುವಕ ಮತ್ತು ಆತನ ತಂದೆ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ತಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ತಾಯಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅಜ್ಜಿಯ ಜೊತೆಗಿದ್ದ ಬಾಲಕಿಯನ್ನು ದೊಡ್ಡಮ್ಮ ಹಾಗೂ ದೊಡ್ಡಪ್ಪರು ಆಕೆಯ ತಂದೆ- ತಾಯಿಗೆ ಮಾಹಿತಿ ತಿಳಿಸದೆ, ವಿನೋದ್ ಕುಮಾರ್ ಎಂಬಾತನ ಜೊತೆ ಕೈವಾರದಲ್ಲಿ ಮದುವೆ ಮಾಡಿಕೊಟ್ಟಿದ್ದಾರೆ ಎಂದು ದೂರಲಾಗಿದೆ.
ಈ ಬಾಲ್ಯ ವಿವಾಹ ಸಂಬಂಧ ಮಾಹಿತಿ ತಿಳಿದ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕವಿತಾ ಹಾಗೂ ಇತರ ಅಧಿಕಾರಿಗಳು ಸರ್ಜಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಬಳಿಕ ಕುಟುಂಬಸ್ಥರನ್ನು ಠಾಣೆಗೆ ಕರೆಯಿಸಿಕೊಂಡು, ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಕವಿತಾ, ''ಬಾಲ್ಯ ವಿವಾಹದ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದರೂ ಇಂತಹ ಪ್ರಕರಣ ಮತ್ತೆ ಮರುಕಳಿಸಿರುವುದು ಬೇಸರ ತಂದಿದೆ. ಮದುವೆ ಮಾಡಿಸಿರುವ ಪೂಜಾರಿ ಹಾಗೂ ಯುವಕನ ಕುಟುಂಬಸ್ಥರು ಮತ್ತು ತಪ್ಪಿಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಸದ್ಯ ಬಾಲಕಿಯನ್ನು ನಾವು ಸಾಂತ್ವನ ಕೇಂದ್ರಕ್ಕೆ ಅಧಿಕಾರಿಗಳ ಜೊತೆ ಕಳುಹಿಸಿದ್ದೇವೆ'' ಎಂದು ತಿಳಿಸಿದ್ದಾರೆ.
ಬಾಲಕಿಯನ್ನು ಮದುವೆ ಆಗಿರುವ ವಿನೋದ್ ಕುಮಾರ್, ತಂದೆ, ತಾಯಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮೋಸ್ಟ್ ವಾಂಟೆಡ್ ನಕ್ಸಲ್ ಶ್ರೀಮತಿಯನ್ನು ಕೋರ್ಟ್ಗೆ ಹಾಜರುಪಡಿಸಿದ ಪೊಲೀಸರು