ಚಿಕ್ಕಮಗಳೂರು: ಭೀಕರ ಬರದಿಂದಾಗಿ ಅರಣ್ಯದಲ್ಲಿ ಕಾಡುಪ್ರಾಣಿಗಳಿಗೂ ಮೇವು, ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಮೇವು, ನೀರು ಅರಸಿಕೊಂಡು ಕಾಡಿನಿಂದ ನಾಡಿನತ್ತ ಕಾಡು ಕೋಣಗಳ ಹಿಂಡು ಬರುತ್ತಿರುವುದು ದಿನದಿಂದ ದಿನಕ್ಕೆ ಮಲೆನಾಡು ಭಾಗದಲ್ಲಿ ಹೆಚ್ಚಾಗಿದೆ.
ಕಳಸ ತಾಲೂಕಿನ ಗೊರಸುಡಿಗೆ, ತೋಟ ದೂರು ಗ್ರಾಮಗಳಲ್ಲಿ ಕಾಡು ಕೋಣ ದಾಳಿ ಮಿತಿ ಮೀರಿದೆ. ಕಾಡು ಕೋಣಗಳ ಹಿಂಡು ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದ್ದು, ಬೆಳೆ ನಾಶ ಮಾಡುತ್ತಿವೆ. ಕೆಲ ಭಾಗದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೂ ಕಾಡುಕೋಣಗಳು ದಾಳಿ ಮಾಡಿರುವ ಘಟನೆಗಳು ಜರುಗಿವೆ. ಹೀಗಾಗಿ ತೋಟಕ್ಕೆ ಹೋಗಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.
ಕಾಫಿ ಬೆಳೆಗಾರರು ಕಂಗಾಲು: ಕಾರ್ಮಿಕರಿಲ್ಲದೇ ಕಾಫಿ ಬೆಳೆಗಾರರು ಕಂಗಾಲು ಆಗಿದ್ದು, ರಾತ್ರಿ ಬೆಳಗ್ಗೆ ಎನ್ನದೆ ತೋಟಗಳ ಬಳಿ ಕಾಡು ಕೋಣಗಳು ಕಾಣಿಸಿಕೊಳ್ಳುವುದರ ಮೂಲಕ ಸ್ಥಳೀಯರಲ್ಲಿ ತೋಟದ ಕಾರ್ಮಿಕರಲ್ಲಿ ಹಾಗೂ ತೋಟದ ಮಾಲೀಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕಾಫಿ, ಅಡಿಕೆ, ಬಾಳೆ ಬೆಳೆಗಳಿಗೆ ಕಾಡುಕೋಣಗಳಿಂದ ಹಾನಿಯಾಗುತ್ತಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಕಾಡುಕೋಣ ಹಾವಳಿ ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂಓದಿ:ಚಾಮರಾಜನಗರ: ಗಾಳಿ-ಮಳೆಗೆ ನೆಲಕಚ್ಚಿದ ಬಾಳೆ ಗಿಡಗಳು, ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ - BANANA CROP LOSS