ಬಾಗಲಕೋಟೆ: ನವರಾತ್ರಿ ಹಬ್ಬವನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ ನಗರದ ಜಗದಾಂಬ ದೇವಿಗೆ 'ಛಪ್ಪನ್ ಭೋಗ್' ಎಂಬ ವಿಶೇಷ ಪೂಜೆ ನೆರವೇರಿಸಲಾಯಿತು. ದಸರಾ ಅಂಗವಾಗಿ ಕಳೆದ ಕೆಲವು ವರ್ಷಗಳಿಂದ ಬಾಗಲಕೋಟೆಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ದೇವಿಗೆ ಪೂಜೆ, ಪುನಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ.
ಛಪ್ಪನ್ ಭೋಗ್ ಎಂದರೇನು?: ಛಪ್ಪನ್ ಭೋಗ್ ಅಂದ್ರೆ 56 ಬಗೆಯ ತಿಂಡಿ-ತಿನಿಸುಗಳು ಎಂದರ್ಥ. ದೇವಿಗೆ ನೈವೇದ್ಯ ರೂಪದಲ್ಲಿ ಸಿಹಿತಿಂಡಿ ಪದಾರ್ಥಗಳು, ಹಣ್ಣು, ಹಂಪಲು, ಗೋಡಂಬಿ, ದ್ರಾಕ್ಷಿ, ಮೈಸೂರು ಪಾಕ್, ಜಿಲೇಬಿ ಸೇರಿದಂತೆ ನಾನಾ ಬಗೆಯ ಪದಾರ್ಥಗಳನ್ನು ಒಂದೆಡೆ ಇಟ್ಟು ಸಮಾಜ ಬಾಂಧವರು ಹಾಗೂ ಭಕ್ತರು ದೇವಿಗೆ ಮಹಾಮಂಗಳಾರತಿ ನೆರವೇರಿಸುತ್ತಾರೆ. ನಂತರ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡುತ್ತಾರೆ.
ಶ್ರೀ ಜಗದಾಂಬ ದೇವಿಗೆ ಭಕ್ತಿಯಿಂದ ಪೂಜೆ ಮಾಡಿದರೆ, ತಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಅಷ್ಟಮಿ ದಿನ ಛಪ್ಪನ್ ಭೋಗ್ ಆಚರಿಸಿಕೊಂಡು ಬರಲಾಗುತ್ತಿದೆ.
ಸಮಾಜದ ಮುಖಂಡ ರಘು ಧೋಂಗಡೆ ಮಾತನಾಡಿ, "ನಾವು ದಸರಾ ಹಬ್ಬವನ್ನು ವಿಜೃಂಭಣೆಯಿಂದ ಮತ್ತು ಭಕ್ತಿಪೂರ್ವಕವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಕಳೆದ 16 ವರ್ಷಗಳಿಂದ ಛಪ್ಪನ್ ಭೋಗ್ ಸೇವೆ ನಡೆಸಿಕೊಂಡು ಬರಲಾಗುತ್ತಿದೆ. ಛಪ್ಪನ್ ಭೋಗ್ ಅಂದ್ರೆ 56 ತಿಂಡಿ-ತಿನಿಸು. ದೇವಿಗೆ 56 ಬಗೆಯ ಖಾದ್ಯಗಳನ್ನು ನೈವೇದ್ಯವಾಗಿ ಇಡಲಾಗುತ್ತದೆ. ಈ ಬಾರಿ 100ಕ್ಕಿಂತ ಹೆಚ್ಚು ವಿವಿಧ ತಿಂಡಿ-ತಿನಿಸುಗಳನ್ನು ಭಕ್ತರು ನೈವೇದ್ಯವಾಗಿ ಅರ್ಪಿಸಿದ್ದಾರೆ" ಎಂದರು.
"ಇಲ್ಲಿ ಯಾವುದೇ ಜಾತಿ ಭೇದಭಾವ ಇಲ್ಲ. ಯಾವುದೇ ಜಾತಿ ಇರಲಿ ಅವರಿಗೆ ಗರ್ಭಗುಡಿಗೆ ಪ್ರವೇಶವಿದೆ. ಅವರಿಂದಲೇ ಮಹಾ ಮಂಗಳಾರತಿ ನೆರವೇರಿಸಿ, ಅವರ ಹೆಸರಿನಿಂದಲೇ ಪ್ರಸಾದವನ್ನು ಭಕ್ತರಿಗೆ ವಿತರಿಸುತ್ತೇವೆ" ಎಂದು ಹೇಳಿದರು.
ಭಕ್ತರಾದ ಸುವರ್ಣ ದಾನಿ ಮಾತನಾಡಿ, "ಎಸ್ಎಸ್ಕೆ ಸಮಾಜದ ಜಗದಾಂಬ ದೇವಸ್ಥಾನದಲ್ಲಿ ಛಪ್ಪನ್ ಭೋಗ್ ಆಚರಿಸುತ್ತಿದ್ದೇವೆ. ಇಂದು 56 ಬಗೆಯ ತಿಂಡಿ-ತಿನಿಸನ್ನು ದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತೇವೆ. ಇದರಲ್ಲಿ ಸಿಹಿ ತಿಂಡಿ, ಡ್ರೈ ಫ್ರೂಟ್ಸ್ ಸೇರಿದಂತೆ ಅನೇಕ ಖಾದ್ಯಗಳನ್ನು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ನೈವೇದ್ಯವಾಗಿ ತಂದಿಡುತ್ತಾರೆ. ಜಾತಿ-ಮತ ಭೇದವಿಲ್ಲದೇ ರಾಜ್ಯ ಹೊರ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ: 'ಆಕಾಶದತ್ತ ಚಿಗುರಿತಲೇ, ಬೇರೆಲ್ಲ ಮುದ್ದಾಯಿತಲೇ ಪರಾಕ್': ಕಾರ್ಣಿಕ ನುಡಿದ ಗೊರವಯ್ಯ