ಶಿವಮೊಗ್ಗ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಪಿ ಅವರು ತುಂಬಾ ಪ್ರಾಮಾಣಿಕರು. ಅವರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಆತ್ಮಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ, ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಚಂದ್ರಶೇಖರನ್ ಪತ್ನಿ ಕವಿತ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಿವಮೊಗ್ಗದ ಕೆಂಚಪ್ಪ ಬಡಾವಣೆಯ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪತಿ ಇಲಾಖೆಯಲ್ಲಿ ತುಂಬಾ ಪ್ರಾಮಾಣಿಕರು. ಅವರು ಯಾವುದೇ ಹಣ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಸರ್ಕಾರ ಈಗ ನಮ್ಮ ಪತಿ ಆತ್ಮಹತ್ಯೆಯ ವಿಚಾರವನ್ನು ಸಿಐಡಿಗೆ ವಹಿಸಿದೆ ಎಂದರು.
ನಮಗೆ ಸರ್ಕಾರದ ಮೇಲೆ ಪೂರ್ಣ ವಿಶ್ವಾಸವಿದೆ. ಸೂಕ್ತ ತನಿಖೆ ನಡೆಸಿ, ಸತ್ಯಾಂಶವನ್ನು ಹೊರ ತರಬೇಕು. ಕಚೇರಿಯಲ್ಲಿ ಒತ್ತಡ ಇತ್ತು ಎಂದು ನಮ್ಮ ಮನೆಯವರು ಎಂದೂ ನಮ್ಮ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಅವರ ಕಚೇರಿಯ ಇತರ ಸಿಬ್ಬಂದಿ ಚಂದ್ರಶೇಖರನ್ ಅವರಿಗೆ ಒತ್ತಡ ಇದೆ ಎಂದು ಹೇಳುತ್ತಿದ್ದರು. ನಮ್ಮ ಮನೆಯವರು ಮೂರು ಜನ ಅಧಿಕಾರಿಗಳ ವಿರುದ್ದ ತಮ್ಮ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ. ಆ ಮೂರು ಜನರ ವಿರುದ್ದ ನಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ. ನಮ್ಮ ಪತಿ ಎಂಪಿಎಂನಲ್ಲಿ ಕೆಲಸ ಮಾಡುವಾಗ 5 ಸಾವಿರ ಜನರ ಅಕೌಂಟ್ ನೋಡಿಕೊಂಡವರು ಎಂದು ತಿಳಿಸಿದರು.
ಅವರು ಪ್ರಾಮಾಣಿಕರಲ್ಲದೇ ಹೋಗಿದ್ರೆ ಮತ್ತೆ ಅವರಿಗೆ ನಿಗಮದಲ್ಲಿ ಕೆಲಸ ಸಿಗುತ್ತಿರಲಿಲ್ಲ. ಅಂದು ನಮ್ಮ ಸಂಬಂಧಿಕರೊಬ್ಬರು ಮಾಚೇನಹಳ್ಳಿಯಲ್ಲಿ ತೀರಿಕೊಂಡಿದ್ದರು. ಅಲ್ಲಿಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಅವರು ನೇಣಿಗೆ ಶರಣಾಗಿದ್ದರು. ಅವರು ಹಣ ಮಾಡುವವರಾಗಿದ್ರೆ, ನಾನು ಕೆಲಸಕ್ಕೆ ಹೋಗಬೇಕಾಗುರುತ್ತಿರಲಿಲ್ಲ. ನಾನು ಸಹ ಅಂಗವಿಕಲರ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಮಗೆ ಇಬ್ಬರು ಮಕ್ಕಳು. ಅವರನ್ನು ಓದಿಸುವ ಜವಾಬ್ದಾರಿ ನನ್ನ ಮೇಲೆ ಇದೆ ಎಂದರು.
ಸಚಿವ ನಾಗೇಂದ್ರ ಅವರ ವಿಶೇಷ ಕರ್ತವ್ಯಾಧಿಕಾರಿ ವೆಂಕಟಗಿರಿ ದಳವಾಯಿ ಅವರು ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಪತ್ನಿ ಕವಿತಾ ಹಾಗೂ ಅವರ ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ಚಂದ್ರಶೇಖರನ್ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು.
ಇದನ್ನೂ ಓದಿ : ಆತ್ಮಹತ್ಯೆ ಪ್ರಕರಣ: ಸಿಎಂಗೆ ನೈತಿಕತೆ ಇದ್ದರೆ ಸಚಿವ ನಾಗೇಂದ್ರನಿಂದ ರಾಜೀನಾಮೆ ಪಡೆಯಲಿ: ಈಶ್ವರಪ್ಪ - Eshwarappa Reaction