ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀ ಶಂಕರ ಮಠ ಶಾರದಾಂಬೆ ಸನ್ನಿಧಿಯಲ್ಲಿ ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗಲೆಂದು ಪ್ರಾರ್ಥಿಸಿ ಜಿಲ್ಲಾ ಬಿಜೆಪಿ ಎಸ್ಸಿ-ಎಸ್ಟಿ ಘಟಕದಿಂದ ಇಂದು ಚಂಡಿಕಾ ಯಾಗ ನೆರವೇರಿಸಲಾಯಿತು. ಜಿಲ್ಲೆಯ ಹಲವು ಬಿಜೆಪಿ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಲೋಕಸಭೆ ಚುನಾವಣೆ 2024ಕ್ಕೆ ಏಳು ಹಂತಗಳಲ್ಲಿ ನಿಗದಿಯಾಗಿದ್ದ ಮತದಾನ ಈಗಾಗಲೇ ಮುಗಿದಿದ್ದು, ಭಾರತ ಮಾತ್ರವೇ ಅಲ್ಲ, ಇಡೀ ವಿಶ್ವದ ಚಿತ್ತ ಭಾರತದತ್ತ ನೆಟ್ಟಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ನಿರೀಕ್ಷಿಸಲಾಗಿದೆ.
ಈಗಾಗಲೇ ವಿವಿಧ ಮಾಧ್ಯಮ ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ನೀಡಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳು ಎನ್‌ಡಿಎಗೆ 350ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ ಎಂದು ತಿಳಿಸಿವೆ. ಆದರೆ ಕಾಂಗ್ರೆಸ್ ಸೇರಿದಂತೆ ದೇಶದ ವಿವಿಧ ಪ್ರತಿಪಕ್ಷಗಳು ಈ ಸಮೀಕ್ಷೆಯನ್ನು ತಿರಸ್ಕರಿಸಿದ್ದು, ಫಲಿತಾಂಶ ಉಲ್ಟಾ ಆಗಲಿದೆ ಎಂದು ಹೇಳಿವೆ.
ಇದನ್ನೂ ಓದಿ: ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಬಿ.ವೈ.ವಿಜಯೇಂದ್ರ ಕುಟುಂಬದಿಂದ ಚಂಡಿಕಾ ಯಾಗ