ಮೈಸೂರು: ಆಷಾಢ ಮಾಸದ, ಕೃಷ್ಣಪಕ್ಷದ, ರೇವತಿ ನಕ್ಷತ್ರದಲ್ಲಿ ಇಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಮಹೋತ್ಸವ ಸಾಂಪ್ರದಾಯಿಕವಾಗಿ ನಡೆಯಿತು. ಚಿನ್ನದ ಪಲ್ಲಕ್ಕಿಯಲ್ಲಿ ಆಸೀನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಉತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಚಾಲನೆ ನೀಡಿದರು. ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ವರ್ಧಂತಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮೂಲ ಚಾಮುಂಡೇಶ್ವರಿ ತಾಯಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಸೇರಿದಂತೆ ಎಲ್ಲ ಧಾರ್ಮಿಕ ಕೈಕಂರ್ಯಗಳು ನಡೆದವು. ಬೆಳಗ್ಗೆ 9.30ಕ್ಕೆ ಮಂಗಳಾರತಿ ನಂತರ ಚಾಮುಂಡೇಶ್ವರಿ ತಾಯಿಯ ಚಿನ್ನದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವವನ್ನು ಭಕ್ತರು ಕಣ್ಣತುಂಬಿಕೊಂಡಿದ್ದು, ಸಂಸದರಾದ ಬಳಿಕ ಮೊದಲ ಬಾರಿಗೆ ಚಾಮುಂಡೇಶ್ವರಿ ವರ್ಧಂತಿಯಲ್ಲಿ ಭಾಗವಹಿಸಿದ ಯದುವೀರ್ ಒಡೆಯರ್ ರಾಜ ಪಾರಂಪರೆಯಂತೆ ವಿಶೇಷ ಪೇಟ ಧರಿಸಿ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದರು.
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, "ಆಷಾಢ ಮಾಸದಲ್ಲಿ ಅಮ್ಮನವರ ವರ್ಧಂತಿ ಮಹೋತ್ಸವ ನಡೆಯುತ್ತದೆ. ಈ ವರ್ಷದ ಉತ್ತಮ ಮಳೆಯಾಗಲಿ, ನಾಡು ಸುಭಿಕ್ಷವಾಗಿರಲಿ ಎಂದು ತಾಯಿಯನ್ನು ಕೇಳಿಕೊಂಡಿದ್ದೇವೆ. ಪರಂಪರೆಗೆ ಅನುಗುಣವಾಗಿ ವರ್ಧಂತಿ ಮಹೋತ್ಸವ ನಡೆದುಕೊಂಡು ಬರುತ್ತಿದೆ. ಅದರಲ್ಲಿ ರಾಜವಂಶಸ್ಥರಾದ ನಾವು ಸಹ ನಮ್ಮ ಸಂಪ್ರದಾಯದಂತೆ ಭಾಗಿಯಾಗಿದ್ದೇವೆ. ನಾಡ ಅಧಿದೇವತೆ ಚಾಮುಂಡೇಶ್ವರಿ ಮೂಲ ಮೂರ್ತಿ ಹಾಗೂ ಉತ್ಸವ ಮೂರ್ತಿ ಎರಡಕ್ಕೂ ಸೀರೆ ಕೊಟ್ಟಿದ್ದೇವೆ. ಎಲ್ಲವೂ ದೇವಿಯ ಅನುಗ್ರಹ. ಕಳೆದ ವರ್ಷ ಸೀರೆ ಕೊಡಬೇಕೆಂದು ಅಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಈ ವರ್ಷ ದೇವಿ ಅನುಗ್ರಹದಿಂದ ಅದು ಪೂರೈಕೆಯಾಗಿದೆ. ನಾಡಿನಲ್ಲಿ ಒಳ್ಳೆ ಮಳೆಯಾಗಿದ್ದು, ನಾವು ಸಹ ಕೆಆರ್ಎಸ್ಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ" ಎಂದು ಹೇಳಿದರು.
ಯದುವೀರ್ ಒಡೆಯರ್ ಮಾತನಾಡಿ, "ರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಇದೇ ದಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿ ನೀಡಿದ್ದರು. ಆದ್ದರಿಂದ ಇದೇ ದಿನ ಸಾಂಪ್ರದಾಯಿಕವಾಗಿ ಚಾಮುಂಡೇಶ್ವರಿಯ ವರ್ಧಂತಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ರಾಜವಂಶಸ್ಥರು ನೀಡಿದ ಚಿನ್ನದ ಪಲ್ಲಕ್ಕಿಯಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಿ, ಮೆರವಣಿಗೆ ಮಾಡುವುದು ವರ್ಧಂತಿ ವಿಶೇಷವಾಗಿದೆ. ನಾನು ಸಂಸದನಾಗಿ ಮಾತ್ರವಲ್ಲ, ಚಾಮುಂಡೇಶ್ವರಿ ನಮ್ಮ ಕುಲದೇವತೆ ಸಾಂಪ್ರದಾಯಿಕವಾಗಿ ವರ್ಧಂತಿ ಮಹೋತ್ಸವದಲ್ಲಿ ಭಾಗವಹಿಸಿದ್ದೇನೆ. ನಾಡಿಗೆ ಉತ್ತಮ ಬೆಳೆಯಾಗಲಿ ತಾಯಿಯನ್ನ ಪ್ರಾರ್ಥನೆ ಮಾಡಿಕೊಂಡಿದ್ದೇನೆ" ಎಂದು ಹೇಳಿದರು.
ರಾತ್ರಿ 8.30ಕ್ಕೆ ಉತ್ಸವ ಫಲಪೂಜೆ, ಅಮ್ಮನವರ ದರ್ಬಾರ್ ಉತ್ಸವ, ಮಂಟಪೋತ್ಸವ, ಹಾಗೂ ರಾಷ್ಟ್ರಾಶೀರ್ವಾದ ಜರುಗಲಿದೆ. ಆ ಮೂಲಕ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಉತ್ಸವಕ್ಕೆ ತೆರೆ ಬೀಳಲಿದೆ.
ಇದನ್ನೂ ಓದಿ: ಮೈಸೂರು ದಸರಾ 2024: ಗಜಪಯಣಕ್ಕೆ 18 ಆನೆಗಳ ಪಟ್ಟಿ ರೆಡಿ - Mysuru Dasara