ಚಾಮರಾಜನಗರ: ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಚಿರತೆಯೊಂದು ಪ್ರತ್ಯಕ್ಷವಾಗಿ ಜನರು ದಿಕ್ಕುಪಾಲಾಗಿ ಓಡಿ ಹೋಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಪರಮಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಪರಮಾಪುರ ಗ್ರಾಮದ ಶಂಭುಲಿಂಗಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದರು. ಈ ವೇಳೆ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ದಿಢೀರ್ ಅಂತ ಹೊರ ಬಂದಿದ್ದು, ಇದನ್ನು ಕಂಡ ಮಾಲೀಕರು ಹಾಗೂ ಕಾರ್ಮಿಕರು ಗಾಬರಿಗೊಂಡು ದಿಕ್ಕಪಾಲಾಗಿ ಓಡಿಹೋಗಿದ್ದಾರೆ ಎನ್ನಲಾಗಿದೆ.
ಕಬ್ಬಿನ ತೋಟದಲ್ಲಿ ಚಿರತೆ ಪ್ರತ್ಯಕ್ಷ ಆಗಿರುವ ಕುರಿತು ಜಮೀನಿನ ಮಾಲೀಕನು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಶಂಭುಲಿಂಗಪ್ಪ ಜಮೀನಿಗೆ ಬೋನ್ ತಂದಿರಿಸಿದ್ದಾರೆ. ಜೊತೆಗೆ ಸುತ್ತ ಮುತ್ತಲಿನ ಪ್ರದೇಶದಲ್ಲಿಯೂ ಕೂಂಬಿಂಗ್ ನಡೆಸಿದ್ದು, ಚಿರತೆ ಸುಳಿವು ಮಾತ್ರ ಪತ್ತೆಯಾಗಿಲ್ಲ.
ಚಿರತೆ ಸೆರೆಗೆ ಒತ್ತಾಯ: ಪರಮಾಪುರ ಭಾಗದಲ್ಲಿ ಚಿರತೆ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಕಬ್ಬಿನ ಗದ್ದೆಯಿಂದ ಓಡಿ ಹೋಗಿದೆ. ಇದರಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಚಿರತೆ ಸೆರೆಗೆ ಮುಂದಾಗಬೇಕೆಂದು ರೈತರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.