ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದ ಮೇಲೆ ವಿಶೇಷ ಒಲವಿಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಬಜೆಟ್ನಲ್ಲಿ ಭರಪೂರ ಕೊಡುಗೆ ಕೊಡುತ್ತಾರೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದ ವೇಳೆ, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೌಢ್ಯ ಅಳಿಸಿ ಹಾಕಿ ಸಾವಿರಾರು ಕೋಟಿ ರೂ. ಅನುದಾನದ ಹೊಳೆ ಹರಿಸಿದ್ದರು. ಈಗ ಎರಡನೇ ಬಾರಿ ಸಿಎಂ ಆಗಿ ಫೆ.16ರಂದು ಪೂರ್ಣಪ್ರಮಾಣದ ಬಜೆಟ್ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ನಡುವೆಯೂ ಗಡಿಜಿಲ್ಲೆಗೆ ಸಾಕಷ್ಟು ಕೊಡುಗೆ ಪ್ರಕಟಿಸುತ್ತಾರೆ ಎಂಬ ನಿರೀಕ್ಷೆ ಜನರಲ್ಲಿದೆ.
2ನೇ ಹಂತದ ಕುಡಿಯುವ ನೀರು, ಮೇಕೆದಾಟು ಯೋಜನೆ: ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಆಗಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು ಈ ಬಾರಿ ಸಿದ್ದರಾಮಯ್ಯ ಘೋಷಣೆ ಮಾಡುತ್ತಾರೆ ಎಂದು ಜನರು ಭರವಸೆ ಇಟ್ಟುಕೊಂಡಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಕೂಡ ಸಿದ್ದರಾಮಯ್ಯಗೆ ಮನವಿ ಮಾಡಿದ್ದು ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಹಾಗೂ ಚಾಮರಾಜನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಜೆಟ್ನಲ್ಲಿ ಅನುದಾನ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಕುಡಿಯುವ ನೀರಿನ ಬವಣೆ ಹೋಗಲಾಡಿಸುವ ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂಬುದು ಜನರ ಒತ್ತಾಯ. ಹನೂರು ಭಾಗವೂ ಯೋಜನೆಯಿಂದ ಅಭಿವೃದ್ಧಿ ಹೊಂದಲಿದ್ದು ಬಜೆಟ್ನಲ್ಲಿ ಅನುದಾನ ಬಿಡುಗಡೆಗೊಳಿಸಿ ಯೋಜನೆ ಆರಂಭಿಸಬೇಕು ಎಂದು ಕನ್ನಡಪರ ಹೋರಾಟಗಾರ ಚಾ.ರಂ.ಶ್ರೀನಿವಾಸ ಗೌಡ ಒತ್ತಾಯಿಸಿದ್ದಾರೆ.
ರೇಷ್ಮೆ, ಪ್ರವಾಸೋದ್ಯಮಕ್ಕೆ ಉತ್ತೇಜನ: ಒಂದು ಕಾಲದಲ್ಲಿ ರೇಷ್ಮೆಗೆ ಹೆಸರುವಾಸಿಯಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಇಳಿಮುಖವಾಗುತ್ತಿದೆ. ರೇಷ್ಮೆಗೆ ಉತ್ತೇಜನ ನೀಡುವ ಯೋಜನೆ ಘೋಷಣೆ ಮಾಡಬೇಕು, ಜಿಲ್ಲೆಯಲ್ಲಿ ಸಿಲ್ಕ್ ಪಾರ್ಕ್ ತೆರೆಯಬೇಕು ಎಂಬುದು ಜನರ ಒತ್ತಾಯವಾಗಿದ್ದು ಸಿದ್ದರಾಮಯ್ಯ ಈ ಸಾಲಿನ ಬಜೆಟ್ನಲ್ಲಿ ಗಡಿಜಿಲ್ಲೆಯಲ್ಲಿ ರೇಷ್ಮೆಗೆ ಉತ್ತೇಜನ ಕೊಡುವ ಕಾರ್ಯಕ್ರಮ ತರುತ್ತಾರೆ ಎಂಬ ನಿರೀಕ್ಷೆ ಇದೆ.
ಚಾಮರಾಜನಗರದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಪ್ರವಾಸಿ ತಾಣಗಳನ್ನು ಬೆಸೆಯುವ ಕಾರ್ಯ ಆಗಬೇಕು, ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ಯೋಜನೆ, ಪ್ಯಾಕೇಜ್ ನೀಡಬೇಕು, ಉತ್ತರ ಕರ್ನಾಕಟ ಮಾದರಿಯಲ್ಲಿ ಚಾಮರಾಜನಗರದ ಎಲ್ಲಾ ಪ್ರವಾಸಿ ಸ್ಥಳಗಳನ್ನು ಬೆಸೆದು ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕಿಸಿಕೊಡಬೇಕು ಎಂದು ಚಿಂತಕ ಲಕ್ಷ್ಮಿನರಸಿಂಹ ತಿಳಿಸಿದ್ದಾರೆ.
ವಿವಿಗೆ ಕೊಡುವರೇ ಅಭಿವೃದ್ಧಿ ಭಾಗ್ಯ?: ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡಿದೆ. ಆದರೆ, ಹೆಚ್ಚು ಅನುದಾನ ನೀಡಿಲ್ಲ. ಕೊಠಡಿಗಳಂತಹ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಹಾಗಾಗಿ, ಹೆಚ್ಚಿನ ಅನುದಾನ ಬೇಕು, ಈ ಹಿನ್ನೆಲೆಯಲ್ಲಿ ಚಾಮರಾಜನಗರ ವಿವಿಗೆ ಅಭಿವೃದ್ಧಿ ಭಾಗ್ಯವನ್ನು ಸಿದ್ದರಾಮಯ್ಯ ಕೊಡಲಿದ್ದಾರೆ ಎಂಬ ಆಸೆಗಣ್ಣನ್ನು ವಿದ್ಯಾರ್ಥಿಗಳು, ಸ್ಥಳೀಯರು ಇಟ್ಟುಕೊಂಡಿದ್ದಾರೆ.
ಸಾಲಮನ್ನಾ, ಕಬ್ಬು ಬಾಕಿ ಹಣ: ಆಗ ಅತಿವೃಷ್ಠಿ ಈಗ ಅನಾವೃಷ್ಠಿಯಿಂದ ರೈತರು ತತ್ತರಿಸಿದ್ದು ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಕಬ್ಬು ಬಾಕಿ ಹಣವನ್ನು ಬಜೆಟ್ನಲ್ಲಿ ಘೋಷಿಸಿ ಸರ್ಕಾರವೇ ನೀಡಬೇಕು ಹಾಗೂ 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಸತೀಶ್ ಮತ್ತು ಸುಂದರಪ್ಪ ಆಗ್ರಹಿಸಿದರು.
ಕೈಗಾರಿಕಾ ಪ್ರದೇಶ ಅಭಿವೃದ್ಧಿ, ಮಾನವ ಹಾಗೂ ವನ್ಯಜೀವಿ ಸಂಘರ್ಷ ತಡೆಗೆ ವಿಶೇಷ ಕಾರ್ಯಕ್ರಮ, ಜಿಲ್ಲಾಕೇಂದ್ರದಲ್ಲಿ ಉಪನಗರ ಸ್ಥಾಪನೆ, ಕೊಳ್ಳೇಗಾಲದಲ್ಲಿ ಬ್ಲಡ್ಬ್ಯಾಂಕ್ ಸ್ಥಾಪನೆ, ಹನೂರು ತಾಲೂಕಿನ ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಅನುದಾನ, ಗುಂಡ್ಲುಪೇಟೆಯಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆ ರೂಪಿಸಬೇಕು ಎಂಬುದು ಜನರ ಒತ್ತಾಸೆಯಾಗಿದೆ.