ಬೆಂಗಳೂರು : ನಾನು ಶೆಡ್ ಗಿರಾಕಿಯೇ, ದೊಡ್ ಗಿರಾಕಿ ಅಲ್ಲ, ನಾನು ಶೆಡ್ ಗಿರಾಕಿ ಆಗೋಕೆ ಇದೇ ಕಾಂಗ್ರೆಸ್ ಕಾರಣ. ನಾನು ಬಿಜೆಪಿಗೆ ಬರದೇ ಹೋಗಿದ್ದಿದ್ರೆ ಇನ್ನೂ ಶೆಡ್ನಲ್ಲೇ ಇರ್ತಿದ್ದೆ. ಕಾಂಗ್ರೆಸ್ನಲ್ಲಿ ಇರ್ತಿದ್ರೆ ನನಗೆ ಶೆಡ್ಡೇ ಗತಿಯಾಗ್ತಿತ್ತು. ಬಿಜೆಪಿಗೆ ಬಂದು ಶೆಡ್‌ನಿಂದ ಗುಡ್ ಪರ್ಸನ್ ಆಗಿದ್ದೇನೆ ಎಂದು ಸಚಿವ ಎಂ. ಬಿ ಪಾಟೀಲ್ಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಸಚಿವ ಎಂ ಬಿ ಪಾಟೀಲ್ ಭೂ ಅಕ್ರಮ ಆರೋಪ ಮಾಡಿದ್ದಾರೆ. ಶೆಡ್ ಗಿರಾಕಿ ಅಂದಿದ್ದಾರೆ. ನಾನೂ ಸಹ ಎಂ. ಬಿ ಪಾಟೀಲ್ ಮಾಧ್ಯಮಗೋಷ್ಟಿ ನೋಡಿದೆ. ಕೆಐಎಡಿಬಿ ಸಿಎ ಸೈಟ್ ವಿಚಾರ ಎತ್ತಿದ್ದಕ್ಕೆ ಅವ್ರು ಮಾತಾಡಿದ್ದಾರೆ. ನಾನು ಕೆಐಎಡಿಬಿ ಸಿಎ ಸೈಟ್ ವಿಚಾರ ಎತ್ತಲಿಲ್ಲ. ಅದನ್ನು ಬಹಿರಂಗಗೊಳಿಸಿದ್ದು ದಿನೇಶ್ ಕಲ್ಲಹಳ್ಳಿ. ವಿಪಕ್ಷ ನಾಯಕ ಆಗಿ ನಾನು ಅದರ ಬಗ್ಗೆ ಮಾತಾಡಿದ್ದೇನೆ ಅಷ್ಟೇ. ಸಿಎ ಸೈಟುಗಳ ಮಾರಾಟಕ್ಕೆ ನಿಯಮಾವಳಿಗಳಿವೆ. ಅದನ್ನು ಅವರು ಪಾಲಿಸಿಲ್ಲ. ನಾನು 2006-07 ರಲ್ಲಿ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ 2 ಎಕರೆ ಖರೀದಿಸಿದ್ದು ಹೌದು ಎಂದರು.
ಮೊದಲು ಸಾಫ್ಟ್‌ವೇರ್ ಟೆಕ್ನಾಲಜೀಸ್ ಅಂತ ತಗೊಂಡು ನಂತರ ಪ್ರಾಜೆಕ್ಟ್ ಬದಲಾಯ್ತು. ಪ್ರಾಜೆಕ್ಟ್ ಬದಲಾಯಿಸಿ ಬೃಂದಾವನ ವೇರ್ ಹೌಸ್ ಹೆಸರಿನ ಗೋದಾಮು ಕಟ್ಟಿದ್ದೇವೆ. ಗೋದಾಮು ಕಟ್ಟೋದೇ ಬೇರೆಯವರಿಗೆ ಬಾಡಿಗೆ ಕೊಡೋದಿಕ್ಕೆ. ಆ ಜಾಗ 800-900 ಅಡಿ ಆಳ ಇತ್ತು. ಮಣ್ಣು ಲೋಡ್ ತಂದು ಭರ್ತಿ ಮಾಡಿ ಕಾಂಪೌಂಡ್ ಹಾಕಿಸಲಾಯ್ತು. 5000 ಚದರಡಿಯ ಶೆಡ್ ಕಟ್ಟಿ, ರಸ್ತೆ, ಗಾರ್ಡನ್ ಮಾಡಲಾಯ್ತು. ಅದರ ಮೇಲೆ ಯಾರದ್ದೋ ಕಣ್ಣು ಬಿತ್ತು. ಕಾಣದ ಕೈಗಳು ಹಿಂದಿನಿಂದ ಕೆಲಸ ಮಾಡಿದವು. ಏನೂ ಕಟ್ಟದಿದ್ದರೂ ಜಮೀನು ರಿಜಿಸ್ಟ್ರೇಷನ್ ಮಾಡಿಕೊಟ್ಟ ಉದಾಹರಣೆಗಳಿವೆ. ನಂತರ ನನಗೆ ಆರೋಗ್ಯ ಕೈಕೊಡ್ತು, 2013-14 ರಲ್ಲಿ ಆ ಭೂಮಿ ರದ್ದು ಮಾಡಿದ್ರು ಎಂದು ಹೇಳಿದರು.
ಆಗ ದೇಶಪಾಂಡೆ ಕೈಗಾರಿಕಾ ಸಚಿವರಾಗಿದ್ರು. ಅವರಿಗೆ ಹೋಗಿ ಕೇಳಿದೆ, ಖರ್ಗೆಯವರಿಗೂ ಕೇಳಿದೆ ಸಮಸ್ಯೆ ಬಗೆಹರಿಸಲಿಲ್ಲ. ನಾನು ಕೋರ್ಟ್ಗೆ ಹೋಗಿ ಸ್ಟೇ ತಗೊಂಡೆ. ಕೋರ್ಟ್ 10% ದಂಡ ಕಟ್ಟಿ ಭೂಮಿ ತಗೋಬಹುದು ಅಂತ ಆದೇಶ ಕೊಡ್ತು. ನಾನು ದಂಡ ಕಟ್ಟಿದೆ, ನಂತರ ಸೇಲ್ ಡೀಡ್ ನನ್ನ ಹೆಸರಿಗೆ ಮಾಡಿಕೊಡಿ ಅಂತ ಕೇಳಿದೆ. ಈ ವಿಚಾರ ಮಾತಾಡುವಾಗ ನನಗೆ ಎಂ. ಬಿ ಪಾಟೀಲ್ ಶೆಡ್ ಗಿರಾಕಿ ಅಂದಿದ್ದಾರೆ. ನಾನು ಲೂಟಿ ಮಾಡಿದ್ದಿದ್ರೆ ದೊಡ್ಡದಾಗಿ ಶೆಡ್ ಕಟ್ತಿದ್ದೆ. ನಾನು ಧೂಳಿನಿಂದ ಬಂದವನು. ಅಷ್ಟು ಯೋಗ್ಯತೆ ಇಲ್ಲ ನನಗೆ. ನಾನು ಕಟ್ಟಿರೋದೇ ಶೆಡ್. ಹಾಗಾಗಿ ಅವರು ಶೆಡ್ ಗಿರಾಕಿ ಅಂದಿದ್ದಾರೆ. ಹಾಗಾಗಿ ನಾನು ಶೆಡ್ ಗಿರಾಕಿಯೇ, ದೊಡ್ ಗಿರಾಕಿ ಅಲ್ಲ ಎಂದು ಟಕ್ಕರ್ ನೀಡಿದರು.
ನಾನು ಆ ಜಮೀನು ತಗೊಂಡಿದ್ದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಚಿವರಾಗಿದ್ದಾಗ. ಅದನ್ನು ಕ್ಯಾನ್ಸಲ್ ಮಾಡಿದ್ದು ನಾನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ. ಈಗ ನಿಯಮಾನುಸಾರ ಸೇಲ್ ಡೀಡ್ ಕೊಡಿ, ಇನ್ನೂ ಹಣ ಕಟ್ಟು ಅಂದ್ರೆ ಕಟ್ತೇನೆ. ನಾನು ಏನೋ ಅಪರಾಧ ಮಾಡಿದ ಹಾಗೆ, ಯಾರಿಗೋ ಮೋಸ ಮಾಡಿದೀನಿ ಎನ್ನುವಂತೆ ಎಂಬಿ ಪಾಟೀಲ್ ಮಾತಾಡಿದ್ದಾರೆ. ನಾನು ಪ್ರಭಾವ ಬೀರಿ ಅದನ್ನು ಖರೀದಿಸಿಲ್ಲ. ಯಾರಿಗೂ ಮೋಸ ಮಾಡಿಲ್ಲ. ಇನ್ನೂ ಆ ಜಮೀನಿನ ಸೇಲ್ ಡೀಡ್ ನನ್ನ ಹೆಸರಿಗೆ ಆಗಿಲ್ಲ. ಬಿಜೆಪಿ ಸರ್ಕಾರ ಇದ್ದಾಗಲೇ ಸೇಲ್ ಡೀಡ್ ಮಾಡಿಕೊಳ್ಳಬಹುದಿತ್ತು.ನಾನು ಪ್ರಭಾವ ಬಳಸಲ್ಲ, ನ್ಯಾಯಯುತವಾಗಿ ಸೇಲ್ ಡೀಡ್ ಮಾಡಿಕೊಡಲಿ. ನನ್ನ ಶೆಡ್ ಗಿರಾಕಿ ಅಂದಿದ್ದಾರೆ, ಸಂತೋಷ. ನಾನು ನಿಮ್ಮಷ್ಟು ದೊಡ್ಡವನಲ್ಲ ಎಂದು ಎಂ ಬಿ ಪಾಟೀಲ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಖರ್ಗೆಯವರಿಂದ ರಾಜಕೀಯ ಕಲಿತು ಅವರ ವಿರುದ್ಧವೇ ಛಲವಾದಿ ಮಾತಾಡ್ತಿದ್ದಾರೆ ಎಂದು ಎಂ. ಬಿ ಪಾಟೀಲ್ ಆರೋಪಿಸಿದ್ದಾರೆ. ಆದರೆ ನನ್ನ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಅಲ್ಲ, ನಾನು ಖರ್ಗೆಯವರ ಜತೆ ಬಹುಕಾಲ ಇದ್ದೆ. ಹಾಗಂತ ಅದು ಗುರು ಶಿಷ್ಯ ಸಂಬಂಧ ಅಲ್ಲ. ನನ್ನ ರಾಜಕೀಯ ಗುರು ಬಂಗಾರಪ್ಪನವರು ಎಂದರು.
ಖರ್ಗೆಯವರು ನನ್ನ ವೈರಿ ಅಲ್ಲ, ಅವರಿಗೆ ಕೊಡೋ ಗೌರವ ಕೊಟ್ಟೇ ಕೊಡ್ತೇನೆ. ದಲಿತ ಸಮುದಾಯದ ಹಿರಿಯ ನಾಯಕರು ಅವರು. ಅವರನ್ನು ನಾನು ಎಲ್ಲೂ ಅಪಮಾನ ಮಾಡಿಲ್ಲ. ನನ್ನ ವಿರುದ್ಧ ಎಂ. ಬಿ ಪಾಟೀಲ್ ಹಗೆತನ ಮಾಡ್ತಿದ್ದಾರಾ? ಹಗೆತನ ಮಾಡಿದ್ರೆ ಮಾಡಿ ಎಂದು ಹೇಳಿದರು.
ಇದನ್ನೂ ಓದಿ : ಬಿಜೆಪಿ ನಾಯಕರು, ಸಂಘಪರಿವಾರದ ರಾಷ್ಟ್ರೋತ್ಥಾನ ಪರಿಷತ್ ತಮ್ಮ ಅಧಿಕಾರ ಬಳಸಿ ಕೆಎಐಡಿಬಿ ಭೂಮಿ ಪಡೆದಿದ್ದಾರೆ; ಎಂಬಿಪಿ - MB Patil