ಬೆಂಗಳೂರು : ಅವಧಿ ಮೀರಿ ಹಾಗೂ ನಿಷೇಧಿತ ಹುಕ್ಕಾ ಪದಾರ್ಥಗಳನ್ನ ಬಳಸಿ ಬಾರ್ ನಡೆಸುತ್ತಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಅದರ ಮಾಲೀಕ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರ ರಾತ್ರಿ ಅಶೋಕನಗರ ಠಾಣಾ ವ್ಯಾಪ್ತಿಯ ವುಡ್ ಸ್ಟ್ರೀಟ್‌ನ ಸಿಆರ್7 ಲಾಂಜ್ ಹೆಸರಿನ ರೆಸ್ಟೋರೆಂಟ್ ಆ್ಯಂಡ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ರೆಸ್ಟೋರೆಂಟ್ ಮಾಲೀಕ ಷಹಬಾಜ್ ಪಾಶಾ, ಆತನ ಸಹಚರರಾದ ಸಚಿನ್ ಹಾಗೂ ಗಣೇಶ್ ಅವಧಿ ಮೀರಿದ ಬಳಿಕವೂ ರೆಸ್ಟೋರೆಂಟ್ನಲ್ಲಿ ಗ್ರಾಹಕರಿಗೆ ಅವಕಾಶ ನೀಡುತ್ತಿದ್ದುದು ಹಾಗೂ ನಿಷೇಧಿತ ಮೊಲಾಸಿಸ್ ಅಂಶವಿರುವ ತಂಬಾಕು ಉತ್ಪನ್ನಗಳನ್ನು ಬಳಸಿ ಹುಕ್ಕಾ ಬಾರ್ ನಡೆಸುತ್ತಿರುವುದು ಪತ್ತೆಯಾಗಿದೆ.
ದಾಳಿ ವೇಳೆ ಹಲವು ಮಂದಿ ಹುಕ್ಕಾ ಸೇದುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಸಿಆರ್7 ಲಾಂಜ್ ಮಾಲೀಕ ಷಹಬಾಜ್ ಪಾಶಾ, ಆತನ ಸಹಚರರಾದ ಸಚಿನ್ ಹಾಗೂ ಗಣೇಶ್ ವಿರುದ್ಧ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ, ಆಹಾರ ಸುರಕ್ಷತೆ ಕಾಯ್ದೆ ಮತ್ತಿತರ ಕಾಯ್ದೆಗಳಡಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ : ಹುಕ್ಕಾ-ಬಾರ್ ನಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು: ಅಧಿಕಾರಿಗಳಿಗೆ ಶಾಕ್