ಬೆಳಗಾವಿ: ಅವೈಜ್ಞಾನಿಕ ಹಂಪ್ಸ್ ಹಾಗೂ ವಿಭಜಕಗಳಿಂದ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಪ್ರಾಣ ಹಾನಿಯಾದರೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ಎಡಿಜಿಪಿ ಅಲೋಕಕುಮಾರ ಎಚ್ಚರಿಸಿದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಕುರಿತ ಅಧಿಕಾರಿಗಳ ಸಭೆ ಮುಗಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದ ಅವರು, ಇತ್ತೀಚಿಗೆ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ರಸ್ತೆಗಳಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್ ಹಾಗೂ ವಿಭಜಕಳಿಂದಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ದೂರುಗಳು ಕೇಳಿ ಬರುತ್ತಿವೆ. ಹಾಗಾಗಿ, ಈ ಸಂಬಂಧ ಸಭೆಯಲ್ಲಿ ಭಾಗವಹಿಸಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸರಿಪಡಿಸುವಂತೆ ತಿಳಿಸಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿ ಯಾರಾದರೂ ಸಾವನ್ನಪ್ಪಿದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಬಾಚಿ, ಯರಗಟ್ಟಿ, ರಾಯಚೂರು, ನಿಪ್ಪಾಣಿ-ಮುಧೋಳ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿವೆ. ಈ ಕುರಿತು ಅಪಘಾತಗಳನ್ನು ತಡೆಗಟ್ಟಲು ಕ್ರಮ ವಹಿಸುವಂತೆ ತಿಳಿಸಿದ್ದೇನೆ. ಇನ್ನು ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಾಲನೆಗೆ ಲೈಸನ್ಸ್ ಪಡೆಯಲಾಗಿದೆ ಎಂಬ ಮಾತ್ರಕ್ಕೆ ಎಲ್ಲ ನಿಯಮಗಳನ್ನು ಪಾಲನೆ ಮಾಡಿದಂತಲ್ಲ. ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ಯಾವ ರೀತಿ ವಾಹನ ಚಲಾಯಿಸಬೇಕು ಎಂಬ ಅರಿವು ಇರುವುದು ಬಹು ಮುಖ್ಯ ಎಂದು ಅಲೋಕಕುಮಾರ ಕಿವಿಮಾತು ಹೇಳಿದರು.
ಮಳೆಗಾಲದಲ್ಲಿ ಬೈಕ್ ಸ್ಕಿಡ್ ಆಗಿ ಹಾಗೂ ಹೆಲ್ಮೆಟ್ ಇಲ್ಲದೆ ಚಾಲನೆ ಮಾಡಿದ ಪರಿಣಾಮ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಸ್ಥಳೀಯ ಅಪಘಾತ ಪ್ರಕರಣಗಳ ವಿಡಿಯೋ ಸಿಕ್ಕಲ್ಲಿ ಅವುಗಳನ್ನು ಸಂಚಾರಿ ನಿಯಮ ಉಲ್ಲಂಘಿಸುವ ಸವಾರರಿಗೆ ತೋರಿಸಿ ಜಾಗೃತಿ ಮೂಡಿಸಲು ಚಿಂತನೆ ನಡೆಸಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸುವವರ ಮೇಲೆ ತೀವ್ರ ನಿಗಾ ವಹಿಸಬೇಕಿದೆ ಎಂದು ಹೇಳಿದರು.
ಹಿಂಡಲಗಾ ಜೈಲಿನಿಂದ ಕೈದಿ ಜಯೇಶ್ ಪೂಜಾರಿ ಬೆದರಿಕೆ ಹಾಕಿದ್ದ ಪ್ರಕರಣದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಲೋಕಕುಮಾರ, ಈಗಾಗಲೇ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ವ್ಯಕ್ತಿ ಏನೂ ಮಾಡಲು ಆಗುತ್ತೆ?. ಖಾಲಿ ಇದ್ದರಿಂದ ಇಂತಹ ಕರೆಗಳನ್ನು ಮಾಡುತ್ತಿದ್ದಾನೆ. ಹಾಗಾಗಿ, ಹೆಚ್ಚು ಭಯ ಪಡುವ ಅವಶ್ಯಕತೆ ಇಲ್ಲ. ಆದರೆ, ಸಾಮಾನ್ಯ ವ್ಯಕ್ತಿಯಾಗಿ ಜೀವನ ಇಲ್ಲದವರ ಮನಸ್ಥಿತಿ ತಿಳಿಯಲು ಪ್ರಯತ್ನಿಸಬೇಕು ಎಂದು ಅಲೋಕಕುಮಾರ ಹೇಳಿದರು.