ಹಾಸನ/ಚಿಕ್ಕಮಗಳೂರು: ಹಾಸನಾಂಬೆ ದೇವಿ ದರ್ಶನಕ್ಕೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿ ಮಹಿಳೆ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ಗ್ರಾಮದ 38 ವರ್ಷದ ವನಿತಾ ಮೃತ ಮಹಿಳೆ.
ಇಂದು ಬೆಳಗಿನ ಜಾವ 4 ಗಂಟೆಗೆ ಚಿಕ್ಕಮಗಳೂರಿನಿಂದ ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನಕ್ಕೆ ಹೊರಟಿದ್ದ ಮಂಜು-ವನಿತಾ ದಂಪತಿ ಇದ್ದ ಕಾರು ಕಲ್ಕೆರೆ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿದೆ. ಸದ್ದು ಕೇಳಿ ಓಡಿ ಬಂದ ಸ್ಥಳೀಯರು, ಕೂಡಲೇ ನೀರಿಗಿಳಿದು ಅವರ ರಕ್ಷಣೆಗೆ ಮುಂದಾಗಿದ್ದರು. ಕಾರಿಗೆ ಹಗ್ಗ ಕಟ್ಟಿ ಎಳೆದಿದ್ದರಿಂದ ಮಂಜು ಪ್ರಾಣಾಪಾಯದಿಂದ ಪಾರಾದರೆ, ಅವರ ಪತ್ನಿ ವನಿತಾ ಅವರನ್ನು ರಕ್ಷಿಸಲು ಇನ್ನಿಲ್ಲದ ಹರಸಾಹಪಟ್ಟರು. ಕಾರಿನಿಂದ ಮಹಿಳೆಯನ್ನು ಹೊರತಂದ ಗ್ರಾಮಸ್ಥರು, ಅವರನ್ನು ಬದುಕಿಸಲು ಪ್ರಯತ್ನಿಸಿದರು. ಎದೆ ಬಡಿದು, ಬಾಯಿಗೆ ಉಸಿರು ನೀಡಿ, ಕೈಕಾಲು ಉಜ್ಜಿ ಜೀವ ಉಳಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರು ಕೆರೆಯಲ್ಲಿ ಮುಳುಗಿದ್ದರಿಂದ ನೀರು ಕುಡಿದಿದ್ದ ವನಿತಾ ಉಸಿರುಗಟ್ಡಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೇಲೂರು ಪೊಲೀಸರು ಪರಿಶೀಲನೆ ನಡೆಸಿ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಟೆಸ್ಲಾ ಕಾರು ಪಲ್ಟಿಯಾಗಿ ಸ್ಫೋಟ; ಕೆನಡಾದಲ್ಲಿ ನಾಸಿಕ್ ಯುವಕ ಸೇರಿ ಮೂವರು ಭಾರತೀಯರ ಸಾವು