ದಾವಣಗೆರೆ: ಕಂಟೈನರ್ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಶನಿವಾರ ಸಂಭವಿಸಿದೆ.
ಫಾರ್ಚುನರ್ ಕಾರು ಬೆಂಗಳೂರಿಂದ ಗೋವಾಕ್ಕೆ ಹೊರಟಿತ್ತು. ಕಂಟೈನರ್ ಲಾರಿ ಬೆಂಗಳೂರು ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿತ್ತು. ಲಾರಿಯ ಟೈರ್ ಬರ್ಸ್ಟ್ ಆಗಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎಂಟು ಜನರಲ್ಲಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಜ್ವಲ್ ರೆಡ್ಡಿ, ಮಕ್ಕಳಾದ ಹರ್ಷಿತಾ, ನೋಹನ್ ಸ್ಥಳದಲ್ಲೇ ಮೃತಪಟ್ಟವರು.
ತಕ್ಷಣ ಉಳಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ವಿಜಯ ರೆಡ್ಡಿ ಎನ್ನುವವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನುಳಿದ ಶಿಲ್ಪಾ, ಸ್ವರ್ಣ ಜಾರ್ಜ್, ಮಧುಮಿತ, ಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿದ್ದವರು ಬೆಂಗಳೂರಿನ ತಾಣಸಂದ್ರ ನಿವಾಸಿಗಳು ಆಗಿದ್ದು, ಕುಟುಂಬ ಸಮೇತ ಗೋವಾಗೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಈ ಮಧ್ಯೆ ಚಿತ್ರದುರ್ಗದ ಬಳಿ ಈ ಘಟನೆ ನಡೆದಿದೆ. ಮೃತದೇಹಗಳನ್ನು ದಾವಣಗೆರೆ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.
ಇದನ್ನೂ ಓದಿ: ಅಲಕನಂದಾ ನದಿಗೆ ಉರುಳಿ ಬಿದ್ದ ಟೆಂಪೋ ಟ್ರಾವೆಲರ್: 10ಕ್ಕೂ ಹೆಚ್ಚು ಜನರ ದಾರುಣ ಸಾವು - Road accident in Rudraprayag