ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಜಂಬೂ ಸವಾರಿಯಲ್ಲಿ ಐದನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ಸಿದ್ಧವಾಗುತ್ತಿರುವ ಕ್ಯಾಪ್ಟನ್ ಅಭಿಮನ್ಯು ಆನೆಗೆ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಅಭಿಮನ್ಯು ಆನೆಯನ್ನು ಪ್ರತ್ಯೇಕ ಶೆಡ್ನಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ.
ಅಭಿಮನ್ಯು ಆನೆಗೆ ಪ್ರತಿ ದಿನ ಹಸಿರು ಹುಲ್ಲು, ಭತ್ತ, ಕಬ್ಬು ಜೊತೆಗೆ ತಾಲೀಮಿನ ನಂತರ ವಿಶೇಷ ಆಹಾರ ನೀಡಲಾಗುತ್ತಿದೆ. ಪ್ರತಿ ದಿನ ಬೆಳಗ್ಗೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಜಂಬೂಸವಾರಿ ತಾಲೀಮು ನಡೆಸಲಾಗುತ್ತಿದೆ. ಇಂದಿನ ತಾಲೀಮುನಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ, ಮೈಸೂರು ಅರಮನೆಯಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಬನ್ನಿಮಂಟಪ ತಲುಪಲು ಒಂದು ಗಂಟೆ 8 ನಿಮಿಷ ಸಮಯ ತೆಗೆದುಕೊಂಡಿದೆ.
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ ಎಂದು ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಘೋಷಿಸಿದ್ದಾರೆ. ಈ ಹಿನ್ನೆಲೆ 58 ವರ್ಷ ವಯಸ್ಸಿನ ಅಭಿಮನ್ಯುಗೆ ವಿಶೇಷ ಆಹಾರ ಒದಗಿಸಿ ಆರೈಕೆ ಮಾಡಲಾಗುತ್ತಿದೆ. ಅಭಿಮನ್ಯು ನೇತೃತ್ವದ ಗಜಪಡೆಗೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ದಸರಾ: ತಾಲೀಮು ನಂತರ ಗಜಪಡೆಗೆ ನಿತ್ಯ ಮೆಟಲ್ ಡಿಟೆಕ್ಟರ್ ಪರೀಕ್ಷೆ, ಮೊದಲ ಬಾರಿ ಅಳವಡಿಕೆ - Dasara Gajapade