ಕೊಪ್ಪಳ : ಗ್ರಾಮ ಆಡಳಿತಾಧಿಕಾರಿ ನೇಮಕಾತಿ ಪರೀಕ್ಷೆಗಾಗಿ ಬಂದ ಅಭ್ಯರ್ಥಿಗಳ ತುಂಬು ತೋಳು ಅಂಗಿಗೆ ಕತ್ತರಿ ಹಾಕಿದ ಘಟನೆ ಭಾನುವಾರ ಜಿಲ್ಲೆಯಲ್ಲಿ ಜರುಗಿದೆ.
ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗಾಗಿ ಕೊಪ್ಪಳ, ಕುಷ್ಟಗಿ, ಗಂಗಾವತಿ ಸೇರಿದಂತೆ 35 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಒಟ್ಟು 13,060 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ವಸ್ತ್ರ ಸಂಹಿತೆ : ಪರೀಕ್ಷೆಗೆ ಹಾಜರಾಗುವ ಅಭ್ಯಥಿಗಳಿಗೆ ಈ ಮೊದಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಸ್ತ್ರಸಂಹಿತೆ ಕುರಿತು ಪ್ರವೇಶ ಪತ್ರದಲ್ಲಿ ಮಾಹಿತಿ ನೀಡಲಾಗಿತ್ತಾದರೂ, ಕೆಲವು ಅಭ್ಯರ್ಥಿಗಳು ಅದನ್ನು ಗಮನಿಸದೇ ತುಂಬು ತೋಳಿನ ಶರ್ಟ್ ಧರಿಸಿ ಬಂದಿದ್ದರು. ಈ ಹಿನ್ನೆಲೆ ಇಲ್ಲಿನ ಸಿಬ್ಬಂದಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದರು.
ಅದಕ್ಕಾಗಿ ಫುಲ್ ತೋಳು ವಸ್ತ್ರ ಧರಿಸಿ ಬಂದವರು ತಮ್ಮ ಸ್ನೇಹಿತರ ಸಹಾಯದಿಂದ ತುಂಬು ತೋಳಿನ ಶರ್ಟ್ ಬಟ್ಟೆ ಕತ್ತರಿಸಿ, ಪರೀಕ್ಷಾ ಕೊಠಡಿಗೆ ಪ್ರವೇಶ ಪಡೆದರು.
1,173 ಕೇಂದ್ರಗಳಲ್ಲಿ ಪರೀಕ್ಷೆ : ಬೆಂಗಳೂರಿನ 88 ಕೇಂದ್ರ ಸೇರಿದಂತೆ ರಾಜ್ಯದ 1,173 ಕೇಂದ್ರಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಪರೀಕ್ಷೆ ನಡೆಯಿತು ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ತಿಳಿಸಿದ್ದಾರೆ.
ಒಟ್ಟು 4.79 ಲಕ್ಷ ಅಭ್ಯರ್ಥಿಗಳ ಪೈಕಿ 4.16 ಲಕ್ಷ ಮಂದಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದರು. ಅವರಲ್ಲಿ ಶೇ. 80 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ : ಗ್ರಾಮ ಆಡಳಿತಾಧಿಕಾರಿ ಕನ್ನಡ ಕಡ್ಡಾಯ ಪರೀಕ್ಷೆ ಯಶಸ್ವಿ: ಶೇ.80ರಷ್ಟು ಅಭ್ಯರ್ಥಿಗಳು ಹಾಜರು