ಬೆಂಗಳೂರು: "ಗಾಂಧೀಜಿ ಗೋ ಹತ್ಯೆ ನಿಷೇಧ ಮಾಡ್ತೀನಿ ಅಂತ ಹೇಳ್ತಿದ್ರು. ಕಾಂಗ್ರೆಸ್ ಪಕ್ಷ ಗಾಂಧಿ ವಿಚಾರಧಾರೆಯ ಪರವೋ ವಿರೋಧವೋ? ಜಿನ್ನಾ ವಿಚಾರಧಾರೆ ಪರ ಇದ್ದರೆ, ಗೋ ಹತ್ಯೆಯನ್ನು ಸಮರ್ಥನೆ ಮಾಡಿಕೊಳ್ತಾರೆ" ಎಂದು ಸಾವರ್ಕರ್ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಮಾಜಿ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದರು.
ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿಂದು ಮಾತನಾಡಿದ ಅವರು, "ದಿನೇಶ್ ಗುಂಡೂರಾವ್ ಗೋ ಹತ್ಯೆಯನ್ನು ಬೆಂಬಲಿಸಿ ಮಾತನಾಡಿದ್ರಾ? ಇಲ್ಲ ಗೋ ಮಾಂಸವನ್ನು ತಿನ್ನೋದನ್ನು ಬೆಂಬಲಿಸಿ ಮಾತನಾಡಿದ್ರಾ? ಅವರು ಯಾವುದನ್ನು ಪ್ರಮೋಟ್ ಮಾಡಲು ಹೊರಟಿದ್ದಾರೆ?. ಆ ರೀತಿ ದಂಧೆಯನ್ನು ಏನಾದರೂ ದಿನೇಶ್ ಗುಂಡೂರಾವ್ ಶುರು ಮಾಡಿದ್ರಾ? ದಂಧೆ ಶುರು ಮಾಡಿದ್ದಕ್ಕೆ ಸಪೋರ್ಟ್ ಸಿಗಲಿ ಅಂತ ಮಾತನಾಡಿದ್ರಾ? ಮೂಲಭೂತವಾದ ಮತ್ತು ರಾಷ್ಟ್ರೀಯವಾದಕ್ಕೆ ಆಗಾಧ ವ್ಯತ್ಯಾಸ ಇದೆ. ಮೂಲಭೂತವಾದ ಪಾಕಿಸ್ತಾನ ನಿರ್ಮಾಣಕ್ಕೆ ಕಾರಣವಾಯ್ತು. ರಾಷ್ಟ್ರೀಯವಾದ ದೇಶಭಕ್ತಿಯಿಂದ ಕೂಡಿದೆ. ರಾಷ್ಟ್ರೀಯವಾದದಿಂದ ದೇಶವನ್ನು ಉಳಿಸಬಹುದು" ಎಂದರು.
ಸಿದ್ದರಾಮಯ್ಯ ಪರ ಮಾತನಾಡಿರುವ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, "ನಾನೇನೂ ಕಾಮೆಂಟ್ಸ್ ಮಾಡಲು ಹೋಗಲ್ಲ. ನೈತಿಕ ಮೌಲ್ಯ ಎತ್ತಿಹಿಡಿಯುವ ರಾಜಕಾರಣಿ ಎಫ್ಐಆರ್ ದಾಖಲಾದ ಮೇಲೆ ರಾಜೀನಾಮೆ ಕೊಡ್ತಾರೆ. ಎಫ್ಐಆರ್ ದಾಖಲಾದ್ರೂ ರಾಜೀನಾಮೆ ಕೊಡದೆ ಇದ್ರೆ ಇವರಿಗೂ ಆತ್ಮಸಾಕ್ಷಿಗೂ ಸಂಬಂಧವೇ ಇಲ್ಲ. ನೀವು ತಪ್ಪು ವ್ಯಕ್ತಿಗೆ ಈ ಪ್ರಶ್ನೆ ಕೇಳ್ತಿದ್ದಿರಾ. ಜಿಟಿಡಿ ಪ್ರಶ್ನೆಗೆ ಉತ್ತರ ಹೇಳುವ ಕೆಲಸ ನನ್ನದಲ್ಲ" ಎಂದು ಹೇಳಿದರು.
"ಎಸ್.ಟಿ.ಸೋಮಶೇಖರ್ ಟೆಕ್ನಿಕಲ್ ಆಗಿ ಬಿಜೆಪಿ. ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ದಿನವೇ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕಿತ್ತು. ಅವರು ಯಾಕೆ ಸಿದ್ದರಾಮಯ್ಯ ಪರ ಮಾತನಾಡುತ್ತಿದ್ದಾರೆ ಅಂತ ಗೊತ್ತು. ಹೀಗಾಗಿ ಅವರ ಇಬ್ಬರ ಬಗ್ಗೆಯೂ ಮಾತನಾಡಲ್ಲ. ಅಶೋಕ್ ಅವರ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ನಾಲ್ಕು ಸಚಿವರಿಗೆ ನೇರವಾಗಿ ಸಿದ್ದರಾಮಯ್ಯ ರಾಜೀನಾಮೆ ಕೇಳುವ ತಾಕತ್ತಿಲ್ಲ. ಅಶೋಕ್ ಅವರ ಹೆಗಲ ಮೇಲೆ ಬಂದೂಕು ಇಟ್ಟು ಸಿದ್ದರಾಮಯ್ಯ ಅವರ ಕಡೆ ಗುರಿ ಹೊಡೆದಿದ್ದಾರೆ. ಅಲ್ಲಿಗೆ ಸಿದ್ದರಾಮಯ್ಯ ಕಡೆ ಬಹಳ ಬಂದೂಕು ಇದೆ ಎನ್ನುವುದು ಸ್ಪಷ್ಟವಾಗಿದೆ" ಎಂದು ಟೀಕಿಸಿದರು.
ಇದನ್ನೂ ಓದಿ: ಸಾವರ್ಕರ್ ಮಾಂಸಹಾರಿ, ಗೋ ಹತ್ಯೆ ವಿರೋಧಿಯಲ್ಲ: ದಿನೇಶ್ ಗುಂಡೂರಾವ್ - Dinesh Gundurao