ಬೆಂಗಳೂರು: ಅನ್ವರ್ ಮಾಣಿಪ್ಪಾಡಿ ಆರೋಪ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
"ಸಿದ್ದರಾಮಯ್ಯನವರೇ, ಸಿಬಿಐ, ಇಡಿ ತನಿಖೆಗಳಿಗೆ ಬೆಚ್ಚಿಬಿದ್ದಿರುವ ನೀವು ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಘಟಾನುಘಟಿ ಹಿರಿಯ ವಕೀಲರನ್ನು ದೆಹಲಿಯಿಂದ ಕರೆಸಿಕೊಂಡು ಕಾನೂನು ರಕ್ಷಣೆ ಪಡೆಯಲು ವ್ಯರ್ಥ ಪ್ರಯತ್ನ ನಡೆಸಿದಿರಿ. ಹೈಕೋರ್ಟ್ ತೀರ್ಪಿನಿಂದ ಮುಖಭಂಗಕ್ಕೀಡಾದ ನಿಮಗೆ ಇನ್ನೊಬ್ಬರ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲು ಯಾವ ನೈತಿಕತೆ ಇದೆ?" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.
"ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಸೇರಿದಂತೆ ಹತ್ತು ಹಲವು ಭ್ರಷ್ಟಾಚಾರದ ಆರೋಪಗಳು ನಿಮ್ಮ ಹಾಗೂ ನಿಮ್ಮ ಸರ್ಕಾರದ ಕೊರಳಿಗೆ ಸುರಳಿಯಾಗಿ ಸುತ್ತಿಕೊಂಡಿವೆ. ಹೇಗಾದರೂ ಮಾಡಿ ಈ ಹಗರಣದಿಂದ ಬಚಾವಾಗಲೇಬೇಕೆಂದು ನಿಮ್ಮ ಕೈ ಕೆಳಗಿನ ಅಧಿಕಾರಿಗಳು ನಡೆಸುವ ಲೋಕಾಯುಕ್ತದ ತನಿಖೆಯಲ್ಲಿ ಕ್ಲೀನ್ ಚಿಟ್ ಪಡೆದುಕೊಳ್ಳಲು ಮುಖ್ಯಮಂತ್ರಿ ಸ್ಥಾನದ ಅಧಿಕಾರವನ್ನೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ" ಎಂದು ಆರೋಪಿಸಿದ್ದಾರೆ.
Dear @siddaramaiah avare,
— Vijayendra Yediyurappa (@BYVijayendra) December 14, 2024
Fearing CBI and ED investigations, is it not true that you desperately tried to block them by questioning the Governor’s sanction and hiring top lawyers from Delhi? Despite all this, you faced humiliation in the High Court. On what moral grounds do you… https://t.co/zb6iorKP8v
"ಉಚ್ಛ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸದಂತೆ ತಡೆಯಲು ಈ ಕ್ಷಣಕ್ಕೂ ದೆಹಲಿಯ ಸಂವಿಧಾನ ತಜ್ಞ ವಕೀಲರನ್ನೇ ಕರೆಸಿ ಕನ್ನಡಿಗರ ತೆರಿಗೆ ಹಣವನ್ನು ನೀರಿನಂತೆ ಪೋಲು ಮಾಡಿ ವಾದ ಮಾಡಿಸಿಕೊಳ್ಳುತ್ತಿದ್ದೀರಿ. ನಿಮಗೆ ಮೆತ್ತಿಕೊಂಡಿರುವ ಕಪ್ಪುಮಸಿ ಅಳಿಸುವ ಯಾವ ರಾಸಾಯನಿಕವೂ ನಿಮಗೆ ದೊರಕುತ್ತಿಲ್ಲ. ಇದರಿಂದ ನೀವು ಹತಾಶರಾಗಿ ತಳ ಬುಡವಿಲ್ಲದ ಕಪೋಲಕಲ್ಪಿತ ವಿಷಯ ಹಿಡಿದುಕೊಂಡು ಬ್ರಹ್ಮಾಸ್ತ್ರವೆಂದು ಭ್ರಮಿಸಿ ಪ್ರಯೋಗಿಸಲು ಹೊರಟಿದ್ದೀರಿ. ಇದರಿಂದ ನೀವು ನನ್ನ ವಿರುದ್ಧ ಅಪಪ್ರಚಾರದ ವ್ಯರ್ಥ ಪ್ರಯತ್ನ ನಡೆಸಬಹುದೇ ಹೊರತೂ ಇನ್ನೇನನ್ನೂ ಸಾಧಿಸಲಾಗದು. ನಿಮ್ಮ ವಿರುದ್ಧದ ಆರೋಪಗಳಿಗೆಲ್ಲ ಸಾಕ್ಷಿಗಳು ದಿನನಿತ್ಯವೂ ಸರಣಿ ರೂಪದಲ್ಲಿ ಮೇಲೆದ್ದು ನಿಮ್ಮ ಮುಖಕ್ಕೆ ರಾಚುತ್ತಲೇ ಇವೆ, ಇಷ್ಟಾಗಿಯೂ ಭಂಡತನದಿಂದ ವರ್ತಿಸುತ್ತಿರುವ ನೀವು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವವನ್ನು ಮಣ್ಣು ಪಾಲು ಮಾಡಿದ ಏಕೈಕ ಮುಖ್ಯಮಂತ್ರಿ ಎಂಬುದು ಇತಿಹಾಸದಲ್ಲಿ ಈಗಾಗಲೇ ದಾಖಲಾಗಿಹೋಗಿದೆ" ಎಂದು ವಿಜಯೇಂದ್ರ ಟೀಕಿಸಿದ್ದಾರೆ.
"ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿರುವುದು ಕಾಂಗ್ರೆಸ್ಸಿಗರು ಆಕ್ರಮಿಸಿರುವ ವಕ್ಫ್ ಆಸ್ತಿಗಳ ಕುರಿತೇ ಹೊರತು ಬಿಜೆಪಿಯವರ ಕುರಿತು ಅಲ್ಲ, ಕಾಂಗ್ರೆಸಿಗರ ವಿರುದ್ಧ ಇರುವ ಆರೋಪಕ್ಕೆ ಯಾರಾದರೂ 150 ಕೋಟಿ ರೂ. ಆಮಿಷವೊಡ್ಡಲು ಸಾಧ್ಯವೇ? ಎಂಬ ಕನಿಷ್ಠ ವಿವೇಕವೂ ನಿಮಗಿಲ್ಲವಲ್ಲ. ತಳಬುಡವಿಲ್ಲದ ಆರೋಪವನ್ನು ನೀವು ಹಾಗೂ ನಿಮ್ಮ ಸಂಪುಟದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಭ್ರಮಿಸುತ್ತಿರುವ ಪರಿ ನಿಮ್ಮ ಬಾಲಿಶತನ ತೋರಿಸುತ್ತಿದೆಯೇ ಹೊರತು ನಿಮ್ಮ ರಾಜಕೀಯ ಜಾಣ್ಮೆಯನ್ನಲ್ಲ. ನಿಮಗೆ ಧೈರ್ಯವಿದ್ದರೆ, ಉಚ್ಛ ನ್ಯಾಯಾಲಯದಲ್ಲಿರುವ ನಿಮ್ಮ ವಿರುದ್ಧದ ಮುಡಾ ಹಗರಣವನ್ನು ಸಿಬಿಐ ತನಿಖೆ ಕೋರಿದ ರಿಟ್ ಅರ್ಜಿಗೆ ಆಕ್ಷೇಪವೆತ್ತದೇ ಸಿಬಿಐ ತನಿಖೆ ನಡೆಯಲು ಅವಕಾಶ ಮಾಡಿಕೊಡಿ ನೋಡೋಣ?" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸವಾಲು ಹಾಕಿದ್ದಾರೆ.
"ನಿಮ್ಮ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರು ಹಾಗೂ ಹಿಂದೂ ಧಾರ್ಮಿಕ ಸ್ಥಳಗಳನ್ನು ಕಬಳಿಸಲು ಹೊರಟಿರುವ ಪ್ರಕರಣ, ಪಂಚಮಸಾಲಿ ಮೀಸಲಾತಿಯ ಹೋರಾಟಗಾರರ ಮೇಲೆ ಅಮಾನುಷವಾಗಿ ನಡೆದ ಪೊಲೀಸ್ ದಬ್ಬಾಳಿಕೆಯ ಲಾಠಿಚಾರ್ಜ್ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಘಟನೆಯನ್ನು, ಬಾಣಂತಿಯರ ಸರಣಿ ಸಾವಿನ ಪ್ರಕರಣ, ದಿನವೂ ಸರಣಿ ರೂಪದಲ್ಲಿ ಹೊರಬರುತ್ತಿರುವ ಮುಡಾ ಹಗರಣ ಗಂಭೀರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಚರ್ಚೆಯನ್ನು ದಿಕ್ಕುತಪ್ಪಿಸಲು ಹಾಗೂ ರಾಜ್ಯದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕ್ಷುಲ್ಲಕ ಕಪೋಲಕಲ್ಪಿತ ವಿಷಯವನ್ನು ರಂಧ್ರಪೂರಿತ ದೋಣಿಯಂತೆ ತೇಲಿಬಿಟ್ಟಿರುವುದು ನಿಮ್ಮ ರಾಜಕೀಯ ಪ್ರಬುದ್ಧತೆಗೆ ತುಕ್ಕು ಹಿಡಿದಿರುವುದನ್ನು ಪ್ರತಿಬಿಂಬಿಸುತ್ತದೆ" ಎಂದು ವಿಜಯೇಂದ್ರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಮಾಣಿಪ್ಪಾಡಿ 150 ಕೋಟಿ ರೂ. ಆಮಿಷದ ಆರೋಪ; ಸಿಬಿಐ ತನಿಖೆಗೆ ಸಿಎಂ ಆಗ್ರಹ