ಶಿವಮೊಗ್ಗ: ಸಚಿವ ನಾಗೇಂದ್ರ ಅವರಿಂದ ಒಂದು ವಾರದೊಳಗೆ ರಾಜೀನಾಮೆ ಪಡೆಯಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂಗೆ ಒತ್ತಾಯಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಚಂದ್ರಶೇಖರನ್ ಪ್ರಕರಣದಲ್ಲಿ ಭಂಡತನ ಬಿಟ್ಟು ಸಚಿವರ ರಾಜೀನಾಮೆ ಪಡೆಯಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ಭಂಡತನ ಪ್ರದರ್ಶಿಸುತ್ತಾರೆ. ಈ ಪ್ರಕರಣದಲ್ಲಿ ಭಂಡತನ ಪ್ರದರ್ಶಿಸಬಾರದು. ಒಂದು ವಾರದ ಗಡುವು ನೀಡುತ್ತಿದ್ದೇವೆ, ಸಚಿವರ ರಾಜೀನಾಮೆ ಪಡೆದು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಮುಂದುವರೆದು ಮಾತನಾಡುತ್ತ, SC - ST ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ರಾಜ್ಯದ ಗಮನ ಸೆಳೆದಿದೆ. ಅವರ ಡೆತ್ನೋಟ್ ಕೂಡ ಬಹಿರಂಗ ಆಗಿದೆ. ದೊಡ್ಡಮಟ್ಟದ ಹಣಕಾಸಿನ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಇದರಲ್ಲಿ ಕೇವಲ ಮೂರ್ನಾಲ್ಕು ಅಧಿಕಾರಿಗಳ ಪಾತ್ರವಷ್ಟೇ ಇಲ್ಲ, ಸಂಬಂಧಪಟ್ಟ ಇಲಾಖೆ ಸಚಿವರ ಕಚೇರಿಯಿಂದಲೂ ಬೆದರಿಕೆ ಕರೆ ಬಂದಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಸಚಿವರ ಅನುಮತಿ ಇಲ್ಲದೇ ದೊಡ್ಡ ಮೊತ್ತದ ಹಣ ಪಕ್ಕದ ರಾಜ್ಯ ತೆಲಂಗಾಣಕ್ಕೆ ಹೋಗಿದೆ. ಇದರಲ್ಲಿ ಸಚಿವರ ಪಾತ್ರ ಇಲ್ಲದೇ ಇದೆಲ್ಲ ಆಗಿರಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲೇ ನೂರಾರು ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ. ಈ ಹಣ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿದೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಈ ಅವ್ಯವಹಾರ ನಡೆಸಲಾಗಿದೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಡವಳಿಕೆ ಅನುಮಾನ ತರುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇದರ ಬಗ್ಗೆ ಹೇಳುತ್ತಲೇ ಬಂದಿದ್ದೇವೆ. ಆಗ ದಾಖಲೆ ಏನಿದೆ ಎಂದು ಪ್ರಶ್ನಿಸುತ್ತಿದ್ದರು ಎಂದು ಆಕ್ರೋಶ ಹೊರಹಾಕಿದರು.
ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡಬೇಕು: ರಾಜ್ಯ ಸರ್ಕಾರ ಚಂದ್ರಶೇಖರನ್ ಅವರ ಕುಟುಂಬಕ್ಕೆ 25 ಲಕ್ಷ ರೂ. ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಬೇಕು. ಇದರಿಂದ ಅವರ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಬಿ.ಎಸ್.ಯಡಿಯೂರಪ್ಪ ಆಗ್ರಹ - BS Yediyurappa