ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಜೀವನಾಡಿಯಾಗಿರುವ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು ಶಿಕಾರಿಪುರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ತಮ್ಮ ಕುಟುಂಬ ಸಮೇತವಾಗಿ ಇಂದು ಬಾಗಿನ ಅರ್ಪಿಸಿದರು.
ಹೊಸನಗರ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕುಮದ್ವತಿ ನದಿಗೆ ನೀರು ಹರಿದು ಬರುತ್ತಿದ್ದು, ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಈ ಜಲಾಶಯ ಸುಮಾರು 21 ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು 1936ರಲ್ಲಿ ಮೈಸೂರು ಮಹಾರಾಜರು ಇದನ್ನು ನಿರ್ಮಿಸಿದ್ದಾರೆ. ಇಲ್ಲಿ 1.82 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ಜಲಾಶಯದಿಂದ 6.732 ಹೆಕ್ಟೇರ್ ಪ್ರದೇಶಕ್ಕೆ ನೀರು ಹಾಯಿಸಲಾಗುತ್ತದೆ.
ತುಂಗಾ ನದಿಗೆ ಶಾಸಕ ಚನ್ನಬಸಪ್ಪ ಬಾಗಿನ ಅರ್ಪಣೆ: ಶಿವಮೊಗ್ಗ ನಗರ ಮಧ್ಯ ಭಾಗದಲ್ಲಿ ಹರಿಯುವ ತುಂಗಾ ನದಿಯು ಭರ್ತಿಯಾಗಿದ್ದು, ಇಂದು ಶಿವಮೊಗ್ಗ ನಗರ ಶಾಸಕ ಎಸ್.ಎಂ. ಚನ್ನಬಸಪ್ಪ ತಮ್ಮ ಕಾರ್ಯಕರ್ತರೊಂದಿಗೆ ನದಿಗೆ ಬಾಗಿನ ಅರ್ಪಿಸಿದರು.
ಮೈದುಂಬಿ ಹರಿಯುತ್ತಿರುವ ತುಂಗೆಗೆ ವಿಶೇಷ ಪೂಜೆ; ತುಂಗಾ ನದಿಯು ಮೈದುಂಬಿ ಹರಿಯುತ್ತಿದ್ದು, ಮಹಿಳೆಯರು ಪೂಜೆ ಸಲ್ಲಿಸಿ ತಮ್ಮ ಭಕ್ತಿ ಮೆರೆದಿದ್ದಾರೆ. ನಗರದ ಕೂರ್ಲಪಲ್ಲಯ್ಯನ ಛತ್ರದ ಬಳಿ ಇರುವ ತುಂಗಾ ನದಿಯ ಮಂಟಪದ ಬಳಿ ಆಗಮಿಸಿದ ಮಹಿಳೆಯರು ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಇಂದು ಭಾಗಿರಥಿ ಹಬ್ಬವನ್ನೂ ಆಚರಿಸುತ್ತಿರುವ ಕಾರಣ ಅನೇಕ ಮಹಿಳೆಯರು ತುಂಗಾ ನದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ದಿನ ಸೂರ್ಯ ತನ್ನ ಪಥ ಬದಲಾಯಿಸುವ ಕಾಲವಾಗಿರುವುದರಿಂದ ನದಿ ತಟಕ್ಕೆ ಆಗಮಿಸಿ ತಮ್ಮ ಹಿರಿಯರಿಗೆ ತರ್ಪಣವನ್ನೂ ನೀಡಿದರು.
ಆಷಾಢದಲ್ಲಿ ಬರುವ ಈ ಭಾಗಿರಥಿ ಹಬ್ಬದ ದಿನದಂದು ಮಹಿಳೆಯರು ಮನೆಯಲ್ಲಿಯೇ ಪೂಜೆ ನಡೆಸಿ, ಹಬ್ಬದಡುಗೆಯನ್ನು ಮಾಡಿಕೊಂಡು ಬಂದು ತುಂಗಾ ನದಿಗೆ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥವನ್ನು ಕರುಣಿಸಲಿ ಎಂದು ಬೇಡಿಕೊಳ್ಳುತ್ತಾರೆ. ಜತೆಗೆ ಹರಿಯುವ ನದಿಗೆ ಸೀರೆ, ರವಿಕೆ, ಬಳೆ, ಅರಿಶಿನ-ಕುಂಕುಮವನ್ನು ಸಮರ್ಪಿಸುತ್ತಾರೆ.
ಶಿವಮೊಗ್ಗ ನಗರದ ನಿವಾಸಿಯಾದ ಸ್ವಪ್ನ ಬದರಿನಾಥ್ ಎಂಬುವರು ತುಂಗಾ ನದಿಗೆ ತಮ್ಮ ಕುಟುಂಬ ಸಮೇತವಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದ ಅವರು ಇಂದು ಭಾಗೀರಥಿ ಜಯಂತಿ ಹಾಗೂ ಸೂರ್ಯ ತನ್ನ ಪಥ ಬದಲಾಯಿಸುವ ಪುಣ್ಯಕಾಲವಾದ ಇಂದು ಯಾವುದೇ ಕೆಲಸ ಮಾಡಿದ್ರು ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಇಲ್ಲಿ ಬಂದು ತುಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ, ಹಿರಿಯರಿಗೆ ತರ್ಪಣವನ್ನು ನೀಡಿದ್ದೇವೆ ಎಂದು ತಿಳಿಸಿದರು.