ರಾಯಚೂರು: ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಟಿಕೆಟ್ ನೀಡಿದ್ದರಿಂದ ಆಕ್ರೋಶಗೊಂಡಿರುವ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿವಿ ನಾಯಕ್, ವರಿಷ್ಠರು ಮತ್ತೊಮ್ಮೆ ಸಮೀಕ್ಷೆ ಮಾಡಬೇಕು. ಟಿಕೆಟ್ ವಿಚಾರದಲ್ಲಿ ಮರುಪರಿಶೀಲನೆ ನಡೆಸಿ ನಿರ್ಧಾರ ಪ್ರಕಟಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ತಮ್ಮ ಬೆಂಬಲಿಗರು, ಹಿತೈಷಿಗಳು ಮತ್ತು ಅಭಿಮಾನಿಗಳು ಪ್ರತ್ಯೇಕ ಚಿಂತನಾ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆತುರ ಹಾಗೂ ಉದ್ವೇಗದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಇನ್ನು ಸ್ವಲ್ಪ ಕಾದು ನೋಡುವೆ. ನನಗೂ ಮತ್ತು ವರಿಷ್ಠರಿಗೆ ಸಮಯ ಇದೆ. ಆ ಪಕ್ವವಾದ ಸಮಯಕ್ಕಾಗಿ ಕಾಯುತ್ತಿರುವೆ. ಮತ್ತೊಮ್ಮೆ ನನ್ನ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಕರೆಯುವೆ. ಆ ಸಭೆಯಲ್ಲಿ ಕಾರ್ಯಕರ್ತರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದಿದ್ದಾರೆ.
ಸದ್ಯಕ್ಕೆ ನಾನು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವೆ. ಇದು ನನ್ನ ಮನೆ. ಈ ಮನೆಯಲ್ಲಿದ್ದುಕೊಂಡೇ ನಾನು ಈ ಹೋರಾಟ ಮಾಡುತ್ತಿರುವೆ. ನನಗೆ ಅವಕಾಶ ಮಾಡಿಕೊಡಿ. ಎಲ್ಲರಂತೆ ನಾನು ಬ್ಲಾಕ್ಮೇಲ್ ರಾಜಕಾರಣ ಮಾಡುವುದಿಲ್ಲ. ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ನನಗೆ ಬೇಸರ ತರಿಸಿದೆ. ಪುನರ್ ವಿಮರ್ಶೆ ಹಾಗೂ ಪುನರ್ ನಿರ್ಧಾರ ಮಾಡಬೇಕು ಅನ್ನೋದೊಂದೆ ನನ್ನ ಮನವಿ. ಕ್ಷೇತ್ರದ ಮತದಾರರು ಒಪ್ಪಿದರೆ ನನ್ನ ಅಭ್ಯಂತರ ಇಲ್ಲ ಎಂದಿದ್ದಾರೆ.
ಚಿಂತನಾ ಸಭೆಯಲ್ಲಿ ಬಿಜೆಪಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಈಗ ಟಿಕೆಟ್ ಘೋಷಣೆ ಮಾಡಿರುವುದನ್ನ ಪರಿಶೀಲನೆ ಮಾಡುವಂತೆ ತಿಳಿಸಿದ್ದಾರೆ. ಅಭಿಮಾನಿಗಳು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ಸಹ ನಡೆಸಿದ್ದಾರೆ. ಅದರಂತೆ ಎರಡು ದಿನದಲ್ಲಿ ನಿರ್ಧಾರ ಮಾಡಬೇಕು. ಜನರ ನಾಡಿಮಿಡಿತ ಅರಿತುಕೊಂಡು ಟಿಕೆಟ್ ನೀಡಬೇಕು. ಇಲ್ಲದಿದ್ದರೆ ನಾನು ನನ್ನ ಬೆಂಬಲಿಗರು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂದಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ನಾನು ಈಗ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾನೆ. ಬಿವಿ ನಾಯಕ ಈಗ ಏನು ಮಾಡಿದ್ದಾರೋ ಅದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ. ಇದೊಂದು ರಾಷ್ಟ್ರೀಯ ಪಕ್ಷ. ಇಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಇದ್ದು, ಟಿಕೆಟ್ ಯಾರಿಗೆ ನೀಡಬೇಕು ಅನ್ನೋದನ್ನು ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ. ಅವರು ತೀರ್ಮಾನ ಮಾಡಿ ನನಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ಇಲ್ಲಿ ನಡೆದಿರುವ ಬೆಳವಣಿಗೆ ರಾಜ್ಯ ಮಟ್ಟದ ನಾಯಕರಿಗೆ ಈ ಬಗ್ಗೆ ಮಾಹಿತಿ ರವಾನೆಯಾಗುತ್ತದೆ. ಪಕ್ಷದ ನಮ್ಮ ಮುಖಂಡರು ಏನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತಾರೆ. ಎಲ್ಲರೂ ಆಕಾಂಕ್ಷಿಗಳು ಇರುತ್ತೇವೆ. ಒಮ್ಮೆ ನಿರ್ಧಾರವಾದ ಮೇಲೆ ಅದಕ್ಕೆ ಬದ್ಧರಾಗಿ ನಾವು ಹೋಗಬೇಕು. ಈಗಲೂ ನಾನು ಬಿವಿ ನಾಯಕ ಅವರ ಜೊತೆಗೆ ಮಾತನಾಡಲು ತಯಾರಿರುವೆ. ಎಲ್ಲರೂ ಒಟ್ಟಿಗೆ ಸೇರಿ ಬಿಜೆಪಿ ಗೆಲ್ಲಿಸಬೇಕಾಗಿದೆ. ಮತ್ತೆ ಮೋದಿಯವರನ್ನ ಪ್ರಧಾನಿ ಮಾಡಲು ನಾವು ಒಟ್ಟಾಗಿ ಹೋಗೋಣ ಎಂದು ಹೇಳಿದ್ದಾರೆ.