ಬೆಳಗಾವಿ: ಕಿತ್ತೂರು ಉತ್ಸವ ನಿಮಿತ್ತ ಇಲ್ಲಿನ ಕೋಟೆ ಆವರಣದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಸ್ತು ಪ್ರದರ್ಶನ ವೀಕ್ಷಿಸಿ ಖುಷಿಪಟ್ಟರು.
ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಹಮ್ಮಿಕೊಂಡಿರುವ ವಸ್ತು ಪ್ರದರ್ಶನದಲ್ಲಿ 140 ವಸ್ತು ಮಳಿಗೆಗಳನ್ನು ತೆರೆಯಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು, ಹೊಸ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಂಡರು. ಜೊತೆಗೆ, ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ಖಾದಿ ಉತ್ಪನ್ನಗಳು, ದೈನಂದಿನ ಬಳಕೆ ವಸ್ತುಗಳು, ಅಲಂಕಾರಿಕ ಸಾಮಗ್ರಿ, ಸಿದ್ಧ ಉಡುಪುಗಳು, ಮಕ್ಕಳ ಆಟಿಕೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಪ್ರದರ್ಶಿಸಲಾಗಿತ್ತು.
ಜಮೀನು ಉಳುಮೆ ಮಾಡಲು ರೈತರಿಗೆ ಅಗತ್ಯವಿರುವ ನೇಗಿಲು, ಕುಂಟೆ, ಬಿತ್ತುವ ಕೂರಿಗೆ, ರೂಟರ್ ಸೇರಿ ಹಲವು ಬಗೆಯ ಸಲಕರಣೆಗಳನ್ನು ಖರೀಸಲು ರೈತ ಸಂಪರ್ಕ ಕೇಂದ್ರದಿಂದ ಸಬ್ಸಿಡಿ ಇರುವ ಬಗ್ಗೆ ತಿಳಿಸಲಾಯಿತು. ಮಹಿಳೆಯರ ಅಲಂಕಾರಿಕ ವಸ್ತುಗಳ ಮಳಿಗೆಗಳ ಜೊತೆಗೆ ಮನೆ ಅಲಂಕಾರಿಕ ವಸ್ತುಗಳು, ಸಾವಯವ ಎಣ್ಣೆ, ಖಾದಿ ಬಟ್ಟೆಗಳು, ಸುವಾಸನೆಭರಿತ ಅಗರಬತ್ತಿಗಳು, ಮಣ್ಣಿನಿಂದ ತಯಾರಿಸಿದ ವಿವಿಧ ವಸ್ತುಗಳು ಮಳಿಗೆಗಳಲ್ಲಿ ಕಂಡುಬಂದವು. ಒಂದಿಷ್ಟು ಜನರು ವಸ್ತುಗಳನ್ನು ಕೇವಲ ನೋಡಿ ಮುಂದೆ ಸಾಗಿದರೆ, ಮತ್ತೊಂದಿಷ್ಟು ಮಂದಿ ಖರೀದಿಸಿದರು.
ಖಾದ್ಯಪ್ರಿಯರಿಗಾಗಿ ಈ ಬಾರಿ ವಿಶೇಷವಾಗಿ ತಿನಿಸುಕಟ್ಟೆಯನ್ನು ಸಹ ಮಳಿಗೆಗಳ ಪಕ್ಕದಲ್ಲೇ ನಿರ್ಮಿಸಲಾಗಿತ್ತು. ಪಾನಿಪುರಿ, ಪಾವ್ ಬಾಜಿ ಜೊತೆ ಜೊತೆಗೆ ಹತ್ತು ಹಲವು ಬಗೆಯ ವಿಶೇಷ ಖಾದ್ಯಗಳನ್ನು ಜನರು ಸವಿದರು.
ಗಮನ ಸೆಳೆದ ಗೋವಿನ ಜೋಳದ ಎತ್ತಿನ ಬಂಡಿ: ಖಾಸಗಿ ಬೀಜ ಕಂಪನಿಯೊಂದು ಗೋವಿನ ಜೋಳದಿಂದ ತಯಾರಿಸಿದ ಎತ್ತಿನ ಬಂಡಿ ವಸ್ತು ಪ್ರದರ್ಶನದ ಆಕರ್ಷಣೆಯಾಗಿತ್ತು. ಉತ್ಸವಕ್ಕೆ ಬಂದ ಪ್ರತಿಯೊಬ್ಬರೂ ಈ ಎತ್ತಿನ ಬಂಡಿ ಕಂಡು ಪುಳಕಿತರಾದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಮಲ್ಲನಗೌಡ ಪಾಟೀಲ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "3 ದಿನಗಳಿಂದ ಕಿತ್ತೂರು ಉತ್ಸವ ವಿಜೃಂಭಣೆಯಿಂದ ಜರುಗುತ್ತಿದೆ. ಇದನ್ನು ಉತ್ಸವ ಅನ್ನುವುದಕ್ಕಿಂತ ರಾಣಿ ಚನ್ನಮ್ಮನ ಜಾತ್ರೆ ಅಂತಾನೇ ಕರೆಯಬಹುದು. ಗೋವಿನ ಜೋಳದಿಂದ ಜೀವ ತುಂಬಿರುವ ಎತ್ತಿನ ಬಂಡಿ ಎಲ್ಲರ ಗಮನ ಸೆಳೆಯುತ್ತಿದೆ" ಎಂದು ಹೇಳಿದರು.
ಸಂಪಗಾವಿಯಿಂದ ಆಗಮಿಸಿದ್ದ ರೈತ ಪುಷ್ಪಕ ಅಕ್ಕಿ ಮಾತನಾಡಿ, "ಕಿತ್ತೂರು ಉತ್ಸವ ಇತಿಹಾಸ ತಿಳಿಸುವ ಜೊತೆಗೆ ರೈತ ಸಮುದಾಯಕ್ಕೂ ಅನುಕೂಲ ಆಗಿದೆ. ಸಬ್ಸಿಡಿ ದರದಲ್ಲಿ ನಮಗೆ ಕೃಷಿ ಉಪಕರಣಗಳು ಮಾರಾಟಕ್ಕೆ ಸಿಗುತ್ತಿವೆ. ನಿಜಕ್ಕೂ ಚನ್ನಮ್ಮನ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ" ಎಂದರು.
ಇದನ್ನೂ ಓದಿ: ಕಿತ್ತೂರಿನ ತುಂಬುಗೆರೆಯಲ್ಲಿ ಜಲಸಾಹಸ ಕ್ರೀಡೆಗಳ ಝಲಕ್- ವಿಡಿಯೋ