ದೊಡ್ಡಬಳ್ಳಾಪುರ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿರುವ ರಾಮನ ದರ್ಶನಕ್ಕಾಗಿ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ದೇವಸ್ವರೂಪಿ ಎಂದು ನಂಬಲಾಗಿರುವ ಎತ್ತನ್ನು ರಾಮನ ದರ್ಶನಕ್ಕಾಗಿ ಕರೆದುಕೊಂಡು ಹೋಗಲಾಗುತ್ತಿದೆ. ಬಸಪ್ಪನ ತೀರ್ಥಯಾತ್ರೆಗಾಗಿ ಸುಮಾರು 30 ಲಕ್ಷ ವೆಚ್ಚದಲ್ಲಿ ವಿಶೇಷ ಬಸ್ ಅನ್ನು ವಿನ್ಯಾಸ ಮಾಡಿದ್ದಾರೆ ರಾಮನ ಭಕ್ತ.
ದೊಡ್ಡಬಳ್ಳಾಪುರ ತಾಲೂಕು ಪೆರಮಗೊಂಡನಹಳ್ಳಿಯಲ್ಲಿರುವ ದಿನ್ನೆ ಅಂಜನೇಯಸ್ವಾಮಿ ದೇವಸ್ಥಾನದ ಆರ್ಚಕ ವಾಸುದೇವಚಾರ್ ಅವರು ಈ ವಿಶೇಷ ಸಾಹಸಕ್ಕೆ ಕೈ ಹಾಕಿದ್ದಾರೆ. ರಾಮನ ಪರಮಭಕ್ತನಾಗಿರುವ ಅವರು, ಕಳೆದ ಒಂದೂವರೆ ವರ್ಷದಿಂದ ಬಸಪ್ಪ ಎಂಬ ಎತ್ತನ್ನು ಸಾಕುತ್ತಿದ್ದು, ಹನುಮಂತ ದೇವರು ಎಂಬ ಹೆಸರಿಟ್ಟಿರುವ ಅವರು ಬಸಪ್ಪನಿಗೆ ದೇವರ ಪಟ್ಟ ನೀಡಿದ್ದಾರೆ.
ಬಸಪ್ಪನಿಗೆ ಹನುಮಂತ ದೇವರು ಎಂದು ನಾಮಕರಣ ಮಾಡಿ ಒಂದು ವರ್ಷಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿತ್ತು. ಇದರ ಪವಿತ್ರತೆಗಾಗಿ ರಾಮನ ದರ್ಶನ ಮಾಡಿಸಲು ಬಸಪ್ಪನನ್ನು ಕರೆದೊಯ್ಯುವ ತಿರ್ಮಾನ ಮಾಡಿದ್ದಾರೆ.
ಬಸಪ್ಪನ ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, "ಬಸಪ್ಪನನ್ನು ಉತ್ತರಪ್ರದೇಶದ ಅಯೋಧ್ಯೆಗೆ ಕರೆದುಕೊಂಡು ಹೋಗುವುದು ಸುಲಭದ ಮಾತಲ್ಲ. ಬಸಪ್ಪನ ತೀರ್ಥಯಾತ್ರೆಗಾಗಿ ಸುಮಾರು 30 ಲಕ್ಷ ವೆಚ್ಚದಲ್ಲಿ ಇಚರ್ ಗಾಡಿಯನ್ನ ಬಸ್ನಂತೆ ಮಾರ್ಪಾಡು ಮಾಡಲಾಗಿದೆ. ಬಸ್ಸಿನ ಒಂದು ಭಾಗದಲ್ಲಿ ಬಸಪ್ಪನಿಗೆ ಬೇಕಾದ ಮೇವು, ನೀರು ಇಡಲು ಮತ್ತು ಮತ್ತೊಂದು ಭಾಗದಲ್ಲಿ ಬಸಪ್ಪನಿಗಾಗಿ ಮೆತ್ತನೆಯ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ.
ಆರು ಜನರ ತಂಡ ಬಸಪ್ಪನ ಜೊತೆ ತೀರ್ಥಯಾತ್ರೆ ಮಾಡಲಿದ್ದು, ಸುಮಾರು 18 ದಿನಗಳ ಯಾತ್ರೆ ಸಾಗಲಿದೆ. ಮೊದಲಿಗೆ ಮಂತ್ರಾಲಯದ ರಾಯರ ದರ್ಶನದಿಂದ ತೀರ್ಥಯಾತ್ರೆ ಪ್ರಾರಂಭವಾಗಿ, ಅನಂತರ ಅಯೋಧ್ಯೆ ರಾಮನ ದರ್ಶನ, ಗಂಗಾ ನದಿಯಲ್ಲಿ ಬಸಪ್ಪನಿಗೆ ಸ್ನಾನ, ಮುಂದೆ ಕಾಶಿ, ಗಯಾ ನೇಪಾಳದ ಸಾಲಿಗ್ರಾಮಕ್ಕೆ ಭೇಟಿ ನೀಡಲಿದೆ.
"ತೀರ್ಥಯಾತ್ರೆಗಾಗಿ ಬಸಪ್ಪನಿಗೆ ಕಳೆದ ಒಂದೂವರೆ ವರ್ಷದಿಂದ ತರಬೇತಿ ನೀಡಲಾಗಿದೆ. ಈ ಮೊದಲು ಶಾಲಾ ವಾಹನ ಬಸ್ನಲ್ಲಿ ಕೇರಳ, ತಮಿಳುನಾಡು ರಾಜ್ಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಬಸಪ್ಪನನ್ನು ಕರೆದುಕೊಂಡು ಹೋಗಿರುವ ಅಭ್ಯಾಸ ಬಸಪ್ಪನಿಗೆ ಇರುವುದರಿಂದ ತೀರ್ಥಯಾತ್ರೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ" ಎಂದರು ವಾಸುದೇವಚಾರ್.
ಇದನ್ನೂ ಓದಿ: ಅಯೋಧ್ಯೆ: ಜೂನ್ 2025ರ ಹೊತ್ತಿಗೆ ಸಂಪೂರ್ಣ ರಾಮ ಮಂದಿರ ನಿರ್ಮಾಣ - Ayodhya Ram Temple complex