ಬೆಂಗಳೂರು: ಹಲವು ಹಣಕಾಸು ಲೆಕ್ಕಾಚಾರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25 ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಒಟ್ಟು 3,71, 383 ಕೋಟಿ ರೂ. ಮೊತ್ತದ ಬಜೆಟ್ ಇದಾಗಿದೆ. ಮದ್ಯದ ದರವನ್ನು ಮತ್ತೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML, ಬಿಯರ್ ಸ್ಲಾಬ್ ಪರಿಷ್ಕರಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದರು. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ, ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ. 2024-25ನೇ ಸಾಲಿಗೆ 38,525 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಇನ್ನು ಅಬಕಾರಿ ಇಲಾಖೆಯ ಎಲ್ಲ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿಯನ್ನು ನಿಗದಿಪಡಿಸಲಾಗುತ್ತದೆ ಹಾಗೂ ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು ಎಂದು ಸಿಎಂ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಸೀಮಿತವಾಗಿರುವುದಿಲ್ಲ. ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಇವು ಪ್ರಮುಖ ಪಾತ್ರ ವಹಿಸಿವೆ. ಈ ಬಜೆಟ್‌ನಲ್ಲಿ ದುರ್ಬಲ ವರ್ಗದವರಿಗೆ ಮತ್ತಷ್ಟು ಆದ್ಯತೆ ನೀಡಲಾಗುವುದು. ಅಭಿವೃದ್ಧಿ ಪೂರಕವಾಗಿ ನಮ್ಮ ಬಜೆಟ್ ಆಗಿದೆ. ಗ್ಯಾರಂಟಿ ಯೋಜನೆ ಮೂಲಕ ಎಲ್ಲಾ ವರ್ಗದವರನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯ ನೀಡುವುದು ನಮ್ಮ ಆಶಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಇಂದಿನ ಬಜೆಟ್ ಮಂಡನೆ ವೇಳೆ ಹೇಳಿದರು.
ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಸಿಎಂ, ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು. ಇದೇ ವೇಳೆ ಕೇಂದ್ರ ಸರ್ಕಾರ ಅನುದಾನ ನೀಡದೇ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಸಿಎಂ ಅವರ ಈ ಮಾತಿಗೆ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಿಜೆಪಿ ಇತರ ಸದಸ್ಯರು ದನಿಗೂಡಿಸಿದರು.
ಇನ್ನು ವಿಧಾನಸಭೆಯಲ್ಲಿ ಸಿಎಂ ಮಂಡಿಸಿದ 2024-25ನೇ ಸಾಲಿನ ಆಯವ್ಯಯವನ್ನು ಪರಿಷತ್ನಲ್ಲಿ ಸಭಾನಾಯಕ ಬೋಸರಾಜ್ ಮಂಡಿಸಿದರು. ನಂತರ ಸದನ ಮುಂದೂಡಿಕೆಯಾಗುತ್ತಿದ್ದಂತೆ ಬಜೆಟ್ ವಿರೋಧಿಸಿ ಬಿಜೆಪಿ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಬಜೆಟ್ ಬರೀ ಓಳು ಎಂದು ಟೀಕಿಸಿದರು.
ಇದನ್ನು ಓದಿ: ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಕಿಡಿ; ವಿಪಕ್ಷಗಳಿಂದ ಕೋಲಾಹಲ