ಬೆಂಗಳೂರು: ಹಲವು ಹಣಕಾಸು ಲೆಕ್ಕಾಚಾರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25 ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ವೇಳೆ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಸಿಎಂ, ತಮ್ಮ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು. ಇದೇ ವೇಳೆ ಕೇಂದ್ರ ಸರ್ಕಾರ ಅನುದಾನ ನೀಡದೇ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಸಿಎಂ ಅವರ ಈ ಮಾತಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಿಜೆಪಿ ಇತರ ಸದಸ್ಯರು ದನಿಗೂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ಸಮಯ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿ ಬಿದ್ದವು. ಬಿಜೆಪಿಯ ವಿರೋಧವನ್ನು ಲೆಕ್ಕಿಸದೇ ಸಿಎಂ ತಮ್ಮ ಬಜೆಟ್ ಭಾಷಣ ಮುಂದುವರಿಸಿದರು.
ಬಜೆಟ್ ಆರಂಭಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಆರ್ ಅಶೋಕ್, ಕಾಂಗ್ರೆಸ್ನ ಇಂದಿನ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಲ್ಲ. ಇದೊಂದು ಕಳಪೆ ಹಾಗೂ ಬೋಗಸ್ ಬಜೆಟ್ ಆಗಿದ್ದು, ಬರೀ ಸುಳ್ಳಿನ ಕಂತೆಯಿಂದ ಕೂಡಿದೆ. ಲೋಕಸಭಾ ಚುನಾವಣೆ ಇರುವುದರಿಂದ ಗಿಮಿಕ್ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಬಜೆಟ್ ವಿರೋಧಿಸಿ ಭಿತ್ತಿಪತ್ರ: ಇನ್ನು ವಿಧಾನಸಭೆಯಲ್ಲಿ ಸಿಎಂ ಮಂಡಿಸಿದ 2024-25ನೇ ಸಾಲಿನ ಆಯವ್ಯಯವನ್ನು ಪರಿಷತ್ನಲ್ಲಿ ಸಭಾನಾಯಕ ಬೋಸರಾಜ್ ಮಂಡಿಸಿದರು. ನಂತರ ಸದನ ಮುಂದೂಡಿಕೆಯಾಗುತ್ತಿದ್ದಂತೆ ಬಜೆಟ್ ವಿರೋಧಿಸಿ ಬಿಜೆಪಿ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಬಜೆಟ್ ಬರೀ ಓಳು ಎಂದು ಟೀಕಿಸಿದರು. ಬ್ಯಾಗ್ ನಿಮಗೆ ಮಾತ್ರವೇ? ನಮಗಿಲ್ಲವೇ? ಕಾಂಗ್ರೆಸ್ಗೆ ಮಾತ್ರ ಬ್ಯಾಗ್ನಲ್ಲಿ ಬಜೆಟ್ ಪ್ರತಿಯೇ ಎಂದು ಕಾಲೆಳೆದರು. ನಂತರ ಮಾತನಾಡಲು ಪ್ರತಿಪಕ್ಷ ಸಚೇತಕ ರವಿಕುಮಾರ್ ಮುಂದಾಗುತ್ತಿದ್ದಂತೆ ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು.
ಸದನ ಮುಂದೂಡಿಕೆ ಬಳಿಕೆ ಸದನದಲ್ಲಿ ಬಜೆಟ್ ಸುಳ್ಳಿನ ಕಂತೆ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಭಿತ್ತಿಪತ್ರ ಪ್ರದರ್ಶಿಸಿದರು. ಖಾಲಿ.. ಖಾಲಿ.. ಖಜಾನೆ ಖಾಲಿ..ಇದು ಸುಳ್ಳಿನ ಬಜೆಟ್ ಎಂದು ಟೀಕೆ ಮಾಡಿದರು. ಸಿದ್ದರಾಮಯ್ಯ ಬಜೆಟ್ ಬರೀ ಓಳು ಎನ್ನುತ್ತಾ, ಭಾರತ್ ಮಾತಾಕಿ ಜೈ, ಪ್ರಧಾನಿ ಮೋದಿಗೆ ಜೈ, ಜೈ ಶ್ರೀರಾಮ್ ಎನ್ನುವ ಘೋಷಣೆ ಮೊಳಗಿಸಿದರು. ರೈತರಿಗೆ ಪರಿಹಾರ ಕೊಡದ ಸಿಎಂ ಸಿದ್ದರಾಮಯ್ಯಗೆ ಧಿಕ್ಕಾರ ಎನ್ನುವ ಘೋಷಣೆ ಹಾಕಿದ ಬಿಜೆಪಿ ಸದಸ್ಯರು, ಬರ ಪರಿಹಾರ ಕೊಡದ ಸಿಎಂ, ಬರೀ ಭಾಷಣ ಮಾಡುತ್ತಿರುವ ಓಳು ಸಿದ್ದರಾಮಯ್ಯ, ಬಕೆಟ್ ಓಳು ಓಳು ಬರೀ ಓಳು ಎನ್ನುತ್ತಾ ಸದನದಿಂದ ನಿರ್ಗಮಿಸಿದರು.
ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ