ಬೆಂಗಳೂರು: ಬಿಜೆಪಿ ಬಜೆಟ್ ಬಹಿಷ್ಕರಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಬಜೆಟ್ನಲ್ಲಿ ಆತ್ಮವಿಶ್ವಾಸ ಕೂಡಿತ್ತು. ಆದರೆ ವಿಪಕ್ಷಗಳಿಗೆ ನಂಬರ್ ನೋಡಿ ಕೂರಲು ಆಗಲಿಲ್ಲ. ಗ್ಯಾರಂಟಿಗಳಿಗೆ ಹಣ ಇಟ್ಟಿದ್ದಾರಲ್ಲ ಅಂತ ಅವರು ತಮ್ಮ ಕೈ ಹಿಸುಕಿಕೊಂಡು ಹೊರನಡೆದಿದ್ದಾರೆ. ಯಾವುದೇ ವಿಪಕ್ಷ ಬಜೆಟ್ಗೆ ಅವಮಾನ ಮಾಡಿ ಹೊರಹೋಗಿಲ್ಲ. ಬದುಕು ಕಟ್ಟಿ ಕೊಟ್ಟ ಬಜೆಟ್ ಇದಾಗಿದೆ. ನೀರಾವರಿ ಇಲಾಖೆಯಲ್ಲಿ ಹೊಸ ಚಿಂತನೆ ರೂಪಿಸಲಾಗಿದೆ. ಬೆಂಗಳೂರಿಗೆ ಕುಡಿಯುವ ನೀರಿಗೆ ಯೋಜನೆ ಘೋಷಿಸಿದ್ದೇವೆ. ನಾವು ಸಾಮರ್ಥ್ಯ ಕಾಯ್ದುಕೊಂಡು ಸಾಲ ಮಾಡಿದ್ದೇವೆ. ಯಾರ ಮೇಲೂ ಹೆಚ್ಚಿನ ತೆರಿಗೆ ಹಾಕಿಲ್ಲ. ಜನರ ಮೇಲೆ ಹೊರೆ ಹಾಕಿಲ್ಲ ಎಂದರು.
ಬಜೆಟ್ಗೆ ಒಪ್ಪಿಗೆ ಕೊಡಲಿಲ್ಲ ಎಂದರೆ ನಾವು ನೌಕರರಿಗೆ ಸಂಬಳ ಕೊಡಬೇಕು. ರಾಜ್ಯದ ಜನರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಉಚಿತ ಬಸ್ ವ್ಯವಸ್ಥೆ ಮಾಡಬೇಕು. ಈ ರೀತಿ ಹೊರ ಹೋಗಿ ತಮ್ಮನ್ನು ಗೆಲ್ಲಿಸಿ ಕಳುಹಿಸಿದ ಜನರಿಗೆ ಅವಮಾನ ಮಾಡಿದ್ದಾರೆ. ಇದರ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅವಮಾನ ಮಾಡಿದ್ದಾರೆ. ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೊಂದು ಮಾದರಿ ಬಜೆಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಟೀಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರಿಂದ ನಾವು ಬೇರೆ ನಿರೀಕ್ಷೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು. ಬಜೆಟ್ ಬಗ್ಗೆ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅಭಿನಂದನೆ ಸಲ್ಲಿಸಿದ ಕುರಿತು ಮಾತನಾಡಿ, ಈ ಬಜೆಟ್‌ನಿಂದ ಸೋಮಶೇಖರ್‌ಗೆ ಮಾತ್ರ ಅಲ್ಲ, ಹಲವರಿಗೆ ಸಂತಸವಾಗಿದೆ. ಬಿಜೆಪಿಯ ಕೆಲವು ಶಾಸಕರಿಗೂ ಖುಷಿ ಇದೆ ಎಂದು ತಿಳಿಸಿದರು.
ಇನ್ನು ಬಜೆಟ್ ಅನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಕ್ಕೆ, ಕುಮಾರಸ್ವಾಮಿ ಅವರು ವಿಧಾನಸಭೆಗೆ ಬಂದು ಕೂತು ಬಜೆಟ್ ಕೇಳಬೇಕು. ಎಲ್ಲೋ ಕೂತು ಮಾತನಾಡಿದರೆ ಹೇಗೆ?. ಬಜೆಟ್ನಲ್ಲಿ ಏನು ತಪ್ಪಿ ದೆ ಎಂದು ಭಾಷಣ ಮಾಡಿ ಹೇಳಬೇಕು. ಅವರ ಮಾರ್ಗದರ್ಶನ ನಮಗೆ ಅಗತ್ಯ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಜನರ ಒಳಿತಿನ ಬಜೆಟ್: ಸಚಿವ ಈಶ್ವರ ಖಂಡ್ರೆ ಗುಣಗಾನ