ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿರುವ ನಾಯಕರ ಮನವೊಲಿಸಲು ಸ್ವತಃ ಬಿ ಎಸ್ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಎಂಟ್ರಿಯಾಗಿದ್ದಾರೆ. ದಾವಣಗೆರೆ ಹೊರವಲಯದ ಅಪೂರ್ವ ರೆಸಾರ್ಟ್‌ನಲ್ಲಿ ಯಡಿಯೂರಪ್ಪ ಹಾಗೂ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಅತೃಪ್ತರೊಂದಿಗೆ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ದಾವಣಗೆರೆ ಚುನಾವಣಾ ಉಸ್ತುವಾರಿ ಬೈರತಿ ಬಸವರಾಜ್ ಅವರು ಸಹ ಪಾಲ್ಗೊಂಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಸಭೆಗೆ ದಾವಣಗೆರೆಯ ಅತೃಪ್ತ ನಾಯಕರು ಗೈರಾದ ಹಿನ್ನೆಲೆಯಲ್ಲಿ ಅವರ ಜತೆ ನೇರವಾಗಿ ಮಾತನಾಡಲು ಹಿರಿಯ ನಾಯಕರು ದಾವಣಗೆರೆಗೆ ಆಗಮಿಸಿದ್ದಾರೆ. ಸಭೆಗೂ ಮುನ್ನ ಅತೃಪ್ತ ನಾಯಕರೊಂದಿಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಯಡಿಯೂರಪ್ಪ ಅವರು ಊಟ ಮಾಡಿದರು. ಮಾಜಿ ಸಚಿವರಾದ ಎಸ್ ಎ ರವೀಂದ್ರನಾಥ್, ಎಂ ಪಿ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಕರುಣಾಕರ ರೆಡ್ಡಿ, ಬಿಜೆಪಿ ಮುಖಂಡ ಶಿವಯೋಗಿ ಸ್ವಾಮಿ, ಲೋಕಿಕೆರೆ ನಾಗರಾಜ್, ಬಿ ಜಿ ಅಜಯ್ ಕುಮಾರ್, ಮಾಯಕೊಂಡ ಮಾಜಿ ಶಾಸಕ ಬಸವರಾಜ್ ನಾಯ್ಕ್, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಸೇರಿದಂತೆ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದಾರೆ.