ಬೆಂಗಳೂರು: ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಇದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆ ಬಗ್ಗೆ ನಮಗಿರುವ ಮಾಹಿತಿಯನ್ನು ಅವರಿಗೆ ನೀಡುತ್ತೇವೆ ಎಂದು ಮಾಜಿ ಸಿಎಂ, ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲಾ ಪ್ರವಾಸಕ್ಕೂ ಮುನ್ನ ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮಗೆ ಇರುವ ಮಾಹಿತಿಯನ್ನು ಅಮಿತ್ ಶಾ ಅವರಿಗೆ ನೀಡುತ್ತೇವೆ. ಒಟ್ಟಾರೆ 28 ಕ್ಷೇತ್ರಗಳನ್ನು ಗೆಲ್ಲಬೇಕು ಅಂತ ಇದ್ದೇವೆ. ಕೆಲವು ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಲೋಕಲ್ ಸಮಸ್ಯೆ ಇದೆ. ಅದು ಆಗಬಾರದು. ಹೊಂದಾಣಿಕೆಗೆ ಧಕ್ಕೆ ಆಗಬಾರದು. ಗುರಿ ತಲುಪಲು ಯಾವ ಲೋಪವೂ ಆಗಬಾರದು ಎಂಬ ಉದ್ದೇಶ ಇದೆ. ಅದಕ್ಕಾಗಿ ಎಲ್ಲ ರೀತಿಯಲ್ಲಿ ಚರ್ಚೆ ಮಾಡ್ತೇವೆ. ನಂತರ ಸಂಜೆ ಚನ್ನಪಟ್ಟಣದಲ್ಲಿ ರೋಡ್ ಶೋ ಇದೆ. ಇಡೀ ರಾಜ್ಯಕ್ಕೆ ಚನ್ನಪಟ್ಟಣದಿಂದ ಒಂದು ಸ್ಪಷ್ಟ ಸಂದೇಶ ಕಳುಹಿಸುತ್ತೇವೆ. ನಾನು ಸಹ ರೋಡ್ ಶೋನಲ್ಲಿ ಭಾಗಿಯಾಗುತ್ತೇನೆ ಎಂದು ಮಾಹಿತಿ ನೀಡಿದರು.
ಡಿಕೆಶಿಗೆ ತಿರುಗೇಟು: ರಾಮನಗರ ಜನರ ಸೇವೆ ಮಾಡಲು ಅಣ್ಣ ತಮ್ಮ ಇರೋದು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಏನು ಸೇವೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಪ್ಲಾನ್ ಅಪ್ರೂವೆಲ್ಗೆ 100 ರೂಪಾಯಿ ಫಿಕ್ಸ್ ಮಾಡಿರೋದು ಸೇವೆ ಅಲ್ವ?. ಅದು ಒಂದು ಸೇವೆ, ಎಲ್ಲರಿಗೂ ಧಮ್ಕಿ ಹಾಕೋದು ಒಂದು ಸೇವೆ. ಅದನ್ನೇ ತಾನೆ ಮಾಡ್ತಾ ಇರೋದು. ಅದ್ದರಿಂದ ಅವ್ರ ಸೇವೆನೇ ಬೇರೆ, ಸೇವೆ ಮಾಡ್ತಾ ಇದ್ದಾರೋ ಅಥವಾ ರಾಜ್ಯವನ್ನು ಯಾವ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದು ತಿರುಗೇಟು ನೀಡಿದರು.
ನಾವು ಇರೋದು ಯಾಕೆ?. ನಾವು ನಿದ್ದೆ ಮಾಡುವುದಕ್ಕೆ ಬಂದಿದ್ದೀವಾ?. ಅವರು ಮಾತ್ರನಾ ಸೇವೆ ಮಾಡೋದು. ಪಂಚಾಯತಿ ಸದಸ್ಯರ ರೀತಿ ಕೆಲಸ ಮಾಡ್ತಾರಂತೆ. ಹಾಗಾದ್ರೆ ಪಂಚಾಯತಿ ಸದಸ್ಯರು ಯಾಕೆ?. ಇವರು ಅಲ್ಲಿ ಹೋಗಿ ಕೈಹಾಕಿದ್ರೆ ಪಂಚಾಯತಿ ಸದಸ್ಯರು ಏನು ಮಾಡಬೇಕು. ಅದರಿಂದ ಅವರ ಮಾತುಗಳು ಇವೆ ಅಲ್ಲ, ಅವರ ಮಾತುಗಳಿಗೂ ನಡುವಳಿಕೆಗೂ ಬಹಳ ವ್ಯತ್ಯಾಸ ಇದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿ ಹೋಗಿದ್ರು ಅಂತ ಕೇಳ್ತಾರೆ, ಅನಿತಾ ಕುಮಾರಸ್ವಾಮಿ ಅವರು ರಾಮನಗರ ಶಾಸಕರಿದ್ದರು. ನಾನು ಚನ್ನಪಟ್ಟಣ ಶಾಸಕ ಇದ್ದೆ. ರಾಮನಗರ, ಚನ್ನಪಟ್ಟಣಕ್ಕೆ ನಾನು ಏನು ಸೇವೆ ಸಲ್ಲಿಸಬೇಕೋ ಸಲ್ಲಿಸಿದ್ದೇನೆ. ನಾನು ಪ್ರಚಾರ ಮಾಡಿಕೊಂಡಿಲ್ಲ. ಪ್ರತಿ ಕುಟುಂಬಕ್ಕೆ ಫ್ರುಟ್ ಕಿಟ್ ಕೊಟ್ಟಿದ್ದೇವೆ. ನಾವು ಡಂಗುರಾ ಹೊಡೆದಿದ್ದೀವಾ?. ಪಾಪ ಹೆಣ ಸಾಗಿಸೋಕು ಹೋಗಿದ್ರಂತೆ. ನಾವು ಜೀವ ಉಳಿಸೋಕೆ ಪ್ರಯತ್ನ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ಜೆಡಿಎಸ್ ನಾಯಕರು ಕೈ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಬಚ್ಚೇಗೌಡರು ನಮ್ಮ ಸ್ನೇಹಿತರು. ದುಡುಕಿ ನಿರ್ಧಾರ ಮಾಡಬೇಡಿ ಅಂತ ಹೇಳಿದ್ದೆ. ಆದರೆ, ಹೋಗಿದ್ದಾರೆ. 8, 10 ಜನ ಹೋಗಿದ್ದಾರೆ, ಅದಕ್ಕೆ ಪರ್ಯಾಯವಾಗಿ ಕೆಲಸ ಮಾಡುತ್ತೇವೆ ಎಂದರು.
ದೇವೇಗೌಡ, ಮೋದಿ ಒಂದೇ ವೇದಿಕೆಯಲ್ಲಿ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ, ಹೆಚ್ .ಡಿ. ದೇವೇಗೌಡ, ಅಮಿತ್ ಶಾ, ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ಮಾಡುವ ವಿಚಾರಕ್ಕೆ ಆ ರೀತಿಯ ಪ್ಲಾನ್ ಆಗಿಲ್ಲ. ನರೇಂದ್ರ ಮೋದಿಯವರು ಇಡೀ ದೇಶಾದ್ಯಂತ ಪ್ರವಾಸ ಮಾಡಬೇಕಿದೆ. ದೇವೇಗೌಡ, ಮೋದಿ ಅವರು ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡ್ತಾರೆ ಎಂದು ತಿಳಿಸಿದರು.
ಸುಮಲತಾ ಭೇಟಿ ಫಲಪ್ರದ: ಮಂಡ್ಯ ನಾಯಕರ ಸಭೆ ವಿಚಾರಕ್ಕೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅಲ್ಲವೆ?. ಅದಕ್ಕೆ ಕರೆದು ಮಾತಾಡಿದ್ದೇವೆ. ಇನ್ನು ಸಂಸದೆ ಸುಮಲತಾ ಬೆಂಬಲ ನೀಡುವ ಬಗ್ಗೆ ವಿಶ್ವಾಸ ಇದೆ. ಸುಮಲತಾ ಅವರು ಒಂದು ಪದ ಹೇಳಿದ್ದಾರೆ. ಆರೋಗ್ಯಕರ ಚರ್ಚೆ ಆಗಿದೆ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಫಲಪ್ರದ ಎಂಬ ಆ ಪದದಲ್ಲೇ ಅರ್ಥ ಇದೆ. ಅದಕ್ಕೆ ಕಾಂಗ್ರೆಸ್ ನವರು ಭಯ ಬಿದ್ದು ಮಾತನಾಡುತ್ತಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಡಿಕೆ ಪ್ರಚಾರ ವಿಚಾರಕ್ಕೆ, ನಾನು ಬಹುತೇಕ ಬೆಂಗಳೂರು ಗ್ರಾಮಾಂತರದಲ್ಲೇ ಇರುತ್ತೇನೆ. ಎಲ್ಲ ಭಾಗಕ್ಕೂ ಕನಕಪುರ, ರಾಮನಗರ, ಚನ್ನಪಟ್ಟಣ, ಕುಣಿಗಲ್ನಲ್ಲಿ ಇರ್ತೀನಿ. ನಾನು ಸಂಪೂರ್ಣ ಪ್ರವಾಸ ಮಾಡುತ್ತೇನೆ. ತುಮಕೂರು, ಚಾಮರಾಜನಗರ, ಮೈಸೂರು ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 14 ಕಡೆ ಪ್ರವಾಸ ಮಾಡುತ್ತೇನೆ. ಕರಾವಳಿ ಬಿಟ್ಟು ಎಲ್ಲ ಕಡೆ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು.
ಮಾಜಿ ಶಾಸಕ ಹೆಚ್ ನಿಂಗಪ್ಪ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ : ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಹೆಚ್.ನಿಂಗಪ್ಪ ಅವರು ಮಂಗಳವಾರ ಬೆಳಗ್ಗೆ ಜೆಡಿಎಸ್ ಪಕ್ಷ ಸೇರಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಹಿರಿಯ ನಾಯಕ ನಿಂಗಪ್ಪ ಅವರು ಪಕ್ಷಕ್ಕೆ ಮರಳುತ್ತಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ನಾಳೆ ಬೆಳಗ್ಗೆ 10.30 ಗಂಟೆಗೆ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ನಿಂಗಪ್ಪ ಅವರು ಪಕ್ಷಕ್ಕೆ ಸೇರಲಿದ್ದಾರೆ. ಈಗಾಗಲೇ ಅವರು ನನ್ನ ಜತೆ ಮಾತುಕತೆ ನಡೆಸಿದ್ದಾರೆ. ಮಾಜಿ ಪ್ರಧಾನಿ ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಅವರ ಮನೆಗೆ ಭೇಟಿ ನೀಡಿದ್ದರು ಎಂದು ಹೆಚ್ಡಿಕೆ ತಿಳಿಸಿದ್ದಾರೆ.